ಪರೀಕ್ಷೆಗೆ ಹಾಜರಾಗಲು ವಿಫಲಳಾದ ವಿ ವಿ ವಿದ್ಯಾರ್ಥಿನಿ ಅತ್ಯಾಚಾರದ ಕತೆ ಕಟ್ಟಿದಳು !

ನವದೆಹಲಿ : ಯೂನಿವರ್ಸಿಟಿ ಪರೀಕ್ಷೆಯಲ್ಲಿ ಹಾಜರಾಗಲು ವಿಫಲಗೊಂಡ ಇಲ್ಲಿನ ನೋಯ್ಡಾದ 19 ವರ್ಷದ ವಿದ್ಯಾರ್ಥಿಯೊಬ್ಬಳು ತನ್ನ ಮೇಲೆ ಅಪರಿಚಿತ ಮಂದಿ ಅತ್ಯಾಚಾರ ನಡೆಸಿದ್ದಾರೆಂದು ನಕಲಿ ದೂರು ನೀಡಿದ  ಘಟನೆಯೊಂದು ನಡೆದಿದೆ ಎಂದು ಪೊಲೀಸರು ಹೇಳಿದರು.

ದಿಲ್ಲಿಯ ವಿದ್ಯಾರ್ಥಿನಿ ನೋಯ್ಡಾದಲ್ಲಿ ವಿವಿಯೊಂದರಲ್ಲಿ ಕಲಿಯುತ್ತಿದ್ದಾಳೆ. ಮೊದಲಿಗೆ ತನ್ನ ಮೇಲೆ ಅತ್ಯಾಚಾರೆ ನಡೆದಿದೆ ಎಂದು ದೂರಿತ್ತ ಈಕೆ ಕೊನೆಗೆ ಮ್ಯಾಜಿಸ್ಟ್ರೇಟರರ ಮುಂದೆ ಸತ್ಯ ಸಂಗತಿ ಬಾಯಿಬಿಟ್ಟಿದ್ದಾಳೆ. ಡಿಸೆಂಬರ್ 2ರಂದು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದರು.

ಪರೀಕ್ಷೆಗೆ ಹಾಜರಾಗಬೇಕಿದ್ದ ಈಕೆ ಅಂದು ತಡವಾಗಿ ಕಾಲೇಜಿಗೆ ಬಂದಿದ್ದು, ಪರೀಕ್ಷೆ ಮಿಸ್ ಮಾಡಿಕೊಂಡಿದ್ದಳು. ಆದರೆ ಈಕೆ ತನ್ನ ಪಾಲಕರನ್ನು ಸಮಾಧಾನಪಡಿಸಲು ಸಾಮೂಹಿಕ ಅತ್ಯಾಚಾರದ ಕತೆ ಕಟ್ಟಿದ್ದಳು. ಕೆಲವು ಅಪರಿಚಿತ ಮಂದಿ ತನ್ನನ್ನು ಅಪಹರಿಸಿ ನ್ಯೂಡೆಲ್ಲಿಯ ಸಫ್ದಾರ್‍ಜಂಗಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ, ನೋಯ್ಡಾದ ಫ್ಲೈಓವರ್ ಬಳಿ ಬಿಟ್ಟು ಹೋಗಿದ್ದಾರೆಂದು ವಿದ್ಯಾರ್ಥಿನಿ ದೂರಿಕೊಂಡಿದ್ದಳು. ಈ ದೂರಿನಂತೆ ಸಫ್ದಾರ್‍ಜಂಗ್ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದರು. ವಿಚಾರಣೆ ವೇಳೆ ಪಾಲಕರೊಂದಿಗೆ ಆಗಮಿಸಿದ್ದ ವಿದ್ಯಾರ್ಥಿನಿ ಅಳುತ್ತಲೇ ನಡೆದ ಸಂಗತಿ ವಿವರಿಸಿದ್ದಾಳೆ.