ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರ ನಾಶದತ್ತ : ಸೈಫುಲ್ಲ ತಂಘಲ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆ ಗುಂಪಾಗುತ್ತಿರುವ ಕಾಸರಗೋಡು ಜಿಲ್ಲೆಯ ಗಡಿನಾಡ ಪ್ರದೇಶದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವರ್ಕಾಡಿ ಎಂಬಲ್ಲಿ ಕೃಷಿಕರ ಅಭಿವೃದ್ಧಿ ಹಾಗೂ ಉನ್ನತಿಯ ಉದ್ದೇಶವನ್ನಿಟ್ಟುಕೊಂಡು 1984ರಲ್ಲಿ ಸ್ಥಾಪಿತವಾದ ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರ ಇದೀಗ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಶದೆಡೆ ಸಾಗುತ್ತಿರುವುದಾಗಿ ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷ ಸೈಫುಲ್ಲ ತಂಘಲ್ ಆರೋಪಿಸಿದರು.

ಈ ಕೇಂದ್ರಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ಅಧಿಕಾರಿಗಳು ನೇಮಕಗೊಂಡಿಲ್ಲ. ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಭೂಮಿಯನ್ನು ಕಂದಾಯ ಇಲಾಖೆಯಿಂದ ಲೀಸಿಗೆ ಪಡೆದದ್ದಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನ ಕೇಂದ್ರಕ್ಕೆ ಸಂಶೋಧನೆಗಾಗಿ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಉಳಕೊಳ್ಳಲು ನಿರ್ಮಿಸಿದಂತಹ ಹಾಸ್ಟೆಲ್ ಕಟ್ಟಡಗಳು ನಿರ್ಮಾಣ ಪೂರ್ತಿಗೊಳ್ಳದೆ ಅರ್ಧದಲ್ಲೇ ಬಾಕಿ ಉಳಿದಿದೆ. ಇಲ್ಲೂ ಕೂಡಾ ಕಟ್ಟಡದ ಕಾಮಗಾರಿ ಮುಂದುವರಿಸುವ ಕೃಷಿ ಇಲಾಖೆಗೆ ಭೂಮಿಯನ್ನು ಕಂದಾಯ ಇಲಾಖೆಯಿಂದ ಲೀಸ್ ಪಡೆದ ಕಾರಣವೇ ಮುಳ್ಳಾಗಿ ಪರಿಣಮಿಸಿರುವುದಾಗಿ ತಂಘಲ್ ಆರೋಪಿಸಿದ್ದಾರೆ.

ಈ ವಿಜ್ಞಾನ ಕೆಂದ್ರ ಸ್ಥಾಪನೆಗೆ ಮುತುವರ್ಜಿ ವಹಿಸಿದ್ದ ಅಧಿಕಾರಿಯೊಬ್ಬರು ಇದೀಗ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೋರ್ಟು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈಗಿರುವಾಗ ಸರಕಾರವೇ ಮುತುವರ್ಜಿ ವಹಿಸಿ ಕೃಷಿಕರಿಗಾಗಿಯೇ ನಿರ್ಮಿಸಲಾಗಿರುವ ಈ ವಿಜ್ಞಾನ ಕೇಂದ್ರವನ್ನು ಅಭಿವೃದ್ದಿಪಥದತ್ತ ಕೊಂಡೊಯ್ಯುವಂತೆ ತಂಘಲ್ ಆಗ್ರಹಿಸಿದ್ದಾರೆ.