ಮೈಸೂರಿನ ಬ್ರಾಹ್ಮಣ ವರರಿಗೆ ದೂರದ ವಾರಣಾಸಿ ವಧುಗಳನ್ನು ತರುವ ಪ್ರಸ್ತಾಪ

 ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯದ ವಧುಗಳ ಕೊರತೆ ಇಂದು ನಿನ್ನೆಯದಲ್ಲ. ಇಲ್ಲಿನ ಹಲವಾರು ಬ್ರಾಹ್ಮಣ ಕುಟುಂಬಗಳು ಅರ್ಹ ವರರಿಗೆ, ಮುಖ್ಯವಾಗಿ ಸಾಂಪ್ರದಾಯಿಕ ಅರ್ಚಕ, ಅಡುಗೆ ಹಾಗೂ ಕೃಷಿ ವೃತ್ತಿಗಳಲ್ಲಿ ತೊಡಗಿರುವ ಯುವಕರಿಗೆ  ಹೆಣ್ಣುಗಳನ್ನು ಹುಡುಕಲು ಹರಸಾಹಸ ಪಡಬೇಕಾದ ಪ್ರಮೇಯ ಒದಗಿ ಬಂದಿದೆ. ಇದೀಗ ಎರಡು ಸರಕಾರೇತರ ಸಂಸ್ಥೆಗಳು ಈ ಸಮಸ್ಯೆಯ ಪರಿಹಾರಕ್ಕೆ ಮುಂದಾಗಿವೆ.

ಮೈಸೂರಿನ ವಿಪ್ರ ಪರಸ್ಪರ ಸಹಾಯ ಸಮಿತಿ ಹಾಗೂ ವಾರಣಾಸಿಯ ಕೇಂದ್ರೀಯ ಬ್ರಾಹ್ಮಣ ಮಹಾಸಭಾ ಶನಿವಾರ ನಗರದಲ್ಲಿ ಸಮಾವೇಶವೊಂದನ್ನು ನಡೆಸಿವೆ. ಕೇಂದ್ರೀಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕಮಲಾಕ್ಷ ಉಪಾಧ್ಯಾಯ ಅವರ ನೇತೃತ್ವದ ಪಂಚಸದಸ್ಯರ ತಂಡವು ಈ ಸಮಾವೇಶದಲ್ಲಿ ಮೈಸೂರಿನ ಸುಮಾರು 500 ಕುಟುಂಬಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

ಉಪಾಧ್ಯಾಯ ಹೇಳುವಂತೆ ವಾರಣಾಸಿಯ ಹಲವು ಬ್ರಾಹ್ಮಣ ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಮೈಸೂರಿನ ವರರಿಗೆ ಮದುವೆ ಮಾಡಿಕೊಡಲು ಸಿದ್ಧವಿವೆ. ಮದುವೆಯನ್ನು ಸರಳವಾಗಿ ಯಾವುದೇ ಬೇಡಿಕೆಗಳನ್ನು ಮುಂದಿಡದೆ ನಡೆಸಬೇಕೆನ್ನುವುದು ನಮ್ಮ ಉದ್ದೇಶ. ಜಾತಕ ಕೂಡಿ ಬಂದಲ್ಲಿ ಮಾತ್ರ ಮದುವೆ ವಿಚಾರದಲ್ಲಿ ಮುಂದುವರಿಯಲಾ ಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿವಾಹ ಪ್ರಸ್ತಾಪಗಳನ್ನು ಹೇಗೆ ಕಳುಹಿಸುವುದು, ಹುಡುಗ-ಹುಡುಗಿ ಭೇಟಿಯಾಗಿ ಮಾತುಕತೆ ನಡೆಸುವ ಬಗ್ಗೆ ಹಾಗೂ ಮತ್ತಿತರ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ತಾವೀಗಾಗಲೇ ಈ ಸಂಬಂಧ ಐದು ಬಾರಿ ವಾರಣಾಸಿಗೆ ಭೇಟಿ ನೀಡಿ ಬಂದಿದ್ದೇನೆ, ಆರಂಭದಲ್ಲಿ 10 ಬ್ರಾಹ್ಮಣ ಯುವಕರಿಗೆ ವಾರಣಾಸಿಯ ವಧುಗಳನ್ನು ಹುಡುಕಿ ಮದುವೆ ಮಾಡಿಸುವ ಯೋಜನೆಯಿದೆ ಎಂದು ವಿಪ್ರ ಪರಸ್ಪರ ಸಹಾಯ ಸಮಿತಿಯ ಎಚ್ ವಿ ರಾಜೀವ್ ಹೇಳಿದ್ದಾರೆ.