ಪುರಾತನ ದೇವಳ ಮೂರ್ತಿ ಕದಿಯಲು ವಿಫಲ ಯತ್ನ

ಕರಾವಳಿ ಅಲೆ ವರದಿ

ಶಿರಸಿ : ಇಲ್ಲಿನ ದೊಡ್ನಳ್ಳಿಯ ಬ್ಯಾಗದ್ದೆಯಲ್ಲಿರುವ ಪುರಾತನವಾದ ಶಂಕರ ನಾರಾಯಣ ದೇವಾಲಯಕ್ಕೆ ಕಳ್ಳರು ಮಧ್ಯರಾತ್ರಿ ನಂತರ ಪ್ರವೇಶಿಸಿ, ಐತಿಹಾಸಿಕ ಲಕ್ಷ್ಮೀನಾರಾಯಣ ಮೂರ್ತಿಯ ಬುಡಕ್ಕೆ ಕಬ್ಬಿಣದಿಂದ ಹೊಡೆದು ಕೀಳಲು ಯತ್ನಿಸಿದ್ದು, ಪುರಾತನ ಮೂರ್ತಿಯಡಿಗೆ ನಿಧಿಯಿರುವ ಶಂಕೆಯಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ.

ಬ್ಯಾಗದ್ದೆಯ ಶಂಕರ ನಾರಾಯಣ ದೇಗುಲವು ಅತ್ಯಂತ ಪುರಾತನ ದೇಗುಲವಾಗಿದ್ದು, ಇದರೊಳಗೆ ಈಶ್ವರ, ಗಣಪತಿ, ದೇವಿ, ಲಕ್ಷ್ಮೀನಾರಾಯಣ ಇತ್ಯಾದಿ ದೇವರ ಮೂರ್ತಿ ಇದೆ. 150-200 ವರ್ಷದಷ್ಟು ಹಳೆ ದೇಗುಲವೆಂದು ಹೇಳಲಾಗುತ್ತಿದೆ. ಇತಿಹಾಸ ತಜ್ಞರ ಪ್ರಕಾರ ಇದು 5ನೇ ಶತಮಾನದಲ್ಲಿ ಕಟ್ಟಿದ ದೇಗುಲವಾಗಿದ್ದು, ಕೆಲವು ದಶಕಗಳ ಹಿಂದೆ ಕಳ್ಳರು ಮೂರ್ತಿಯನ್ನು ತೆಗೆದು ಸಮೀಪ ಕೆರೆ ಏರಿ ಮೇಲೆ ಇಟ್ಟು ಹೋಗಿದ್ದರು. 1982ರಲ್ಲಿ ಮತ್ತೆ ಊರವರು ಸೇರಿ ಹಳೆ ದೇಗುಲದಲ್ಲಿ ಮೂರ್ತಿ ತಂದಿಟ್ಟು ಪೂಜೆ ಆರಂಭಿಸಿದರು.

ಅರ್ಚಕ ಗಂಗಾಧರ ಹೆಗಡೆ ಹೇಳುವಂತೆ, ಇದು ಏಕಶಿಲಾಮೂರ್ತಿಯಾಗಿದ್ದು, ಮೊದಲು ನಿತ್ಯ ಪೂಜೆ ಇದ್ದರೂ ಕೆಲವು ದಿನಗಳಿಂದ ಸೋಮವಾರ ಮಾತ್ರ ಪೂಜೆ ಮಾಡುತ್ತಿದ್ದವು. ಅದೇ ರೀತಿ ಸೋಮವಾರ ಪೂಜೆ ಮುಗಿಸಿ ಸಂಜೆ ಹೋಗಿದ್ದೆವು. ಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ಮತ್ತೊಬ್ಬ ಅರ್ಚಕರು ಬಾಗಿಲು ತೆರೆದು ಈಶ್ವರ ದೇವರ ಪೂಜೆಗೆ ಹೋಗುವಾಗ ಲಕ್ಷ್ಮೀನಾರಾಯಣ ಮೂರ್ತಿ ನೋಡಿದಾಗ ಬುಡಕ್ಕೆ ಹಾನಿಯಾಗಿರುವದು ಕಂಡುಬಂತು. ತಕ್ಷಣ ಊರವರಿಗೆ ಮಾಹಿತಿ ನೀಡಿದ್ದಾರೆ.

 

LEAVE A REPLY