ಪುತ್ತೂರಿನ ಅಭ್ಯರ್ಥಿ ಬಗ್ಗೆ ಅಸ್ಪಷ್ಟತೆ, ಬೆಳ್ತಂಗಡಿಯಲ್ಲಿ ಬಂಗೇರಾ ಸಾಧ್ಯತೆ, ಸುಳ್ಯದಲ್ಲಿ ಬದಲಾವಣೆ ಬೇಕಂತೆ

ವಿಧಾನಸಭಾ ಚುನಾವಣೆ ಪೂರ್ವಾವಲೋಕನ

  • ಸಮೀಕ್ಷಾ ವರದಿ

ಮಂಗಳೂರು : ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆಯೆನ್ನುವಾಗ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಿಂದ ಸ್ಪರ್ಧಿಸಲಿಚ್ಛಿಸುವ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಆದರೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಟಿಕೆಟ್ ಪಡೆಯುವ ಸಾಧ್ಯತೆ ಕಡಿಮೆಯೆಂದೇ ಹೇಳಲಾಗುತ್ತಿದೆ. ಯಾವ ಕ್ಷೇತ್ರದಲ್ಲಿಯೂ ಸದ್ಯ ಚಿತ್ರಣ ಸ್ಪಷ್ಟವಾಗಿ ಮೂಡಿ ಬರದೇ ಇದ್ದರೂ ಕನಿಷ್ಠ ಮೂರು ಕ್ಷೇತ್ರಗಳಾದ ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯದಲ್ಲಿ ಅಭ್ಯರ್ಥಿಗಳು ಯಾರಾಗುವ ಸಾಧ್ಯತೆಯಿದೆಯೆಂಬುದಕ್ಕೆ ಕೆಲವು ಸೂಚನೆಗಳು ಸಿಕ್ಕಿವೆ.

ಆದರೆ ತಮ್ಮ ಸಾಧನಾ ಯಾತ್ರೆಯ ಅಂಗವಾಗಿ ಜಿಲ್ಲೆಯಲ್ಲಿ ಸಂಚರಿಸಿದ್ದ ಮುಖ್ಯಮಂತ್ರಿ ಮಾತ್ರ ಎಲ್ಲಾ ಹಾಲಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ದೊರೆಯಲಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಪುತ್ತೂರು

ಇಲ್ಲಿನ ಹಾಲಿ ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿ ಮತ್ತೊಮ್ಮೆ ಟಿಕೆಟ್ ಪಡೆಯಲು ಸರ್ವ ಪ್ರಯತ್ನ ನಡೆಸುವ ಎಲ್ಲಾ ಸಾಧ್ಯತೆಗಳೂ ಇವೆ. ಮಾಜಿ ಬಿಜೆಪಿ ನಾಯಕಿಯಾಗಿರುವ ಶಕುಂತಳಾ ಈ ಹಿಂದೆ ಬಿಜೆಪಿಯಿಂದ ಶಾಸಕಿಯಾಗಿ ಆಯ್ಕೆಯಾಗಿದ್ದವರಾದರೂ 2013ರಲ್ಲಿ ಬಿಜೆಪಿಯಿಂದ ತಮಗೆ ಟಿಕೆಟ್ ದಕ್ಕದು ಎಂದು ತಿಳಿಯುತ್ತಲೇ ಕಾಂಗ್ರೆಸ್ ಪಕ್ಷ ಸೇರಿ ಅಲ್ಲಿಂದಲೇ ಸ್ಪರ್ಧಿಸಿ ಮತ್ತೊಮ್ಮೆ ಶಾಸಕಿಯಾದರು.

ಆದರೆ ಇತ್ತೀಚೆಗೆ ಅವರು ಬಿಜೆಪಿ ಹಾಗೂ ಸಂಘ ಪರಿವಾರದೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಪಕ್ಷ ತನಗೆ ಟಿಕೆಟ್ ನೀಡದೇ ಇದ್ದಲ್ಲಿ ಬಿಜೆಪಿಯಿಂದಲಾದರೂ ಟಿಕೆಟ್ ದೊರೆಯಬಹುದೆಂಬ ಆಶಾಭಾವನೆ ಅವರದ್ದೆಂದು ಹೇಳಲಾಗುತ್ತಿದೆ. ಆದರೆ ಬಿಜೆಪಿ ನಾಯಕತ್ವ ಪುತ್ತೂರಿನಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಹಾಗೂ ಜನರ ಆಶೋತ್ತರಗಳನ್ನು ಈಡೇರಿಸುವ ಯುವ ಅಭ್ಯರ್ಥಿಗಾಗಿ ಶೋಧಿಸುತ್ತಿದೆಯೆನ್ನಲಾಗಿದೆಯಾದರೂ ಇನ್ನೂ ಅರ್ಹ ಅಭ್ಯರ್ಥಿ ದೊರೆತಿಲ್ಲ ಎನ್ನುತ್ತಿವೆ ಮೂಲಗಳು.

ಅತ್ತ ಕಾಂಗ್ರೆಸ್ ಪಕ್ಷ ಹಾಲಿ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯನ್ನು ಪುತ್ತೂರಿನಿಂದ ಕಣಕ್ಕಿಳಿಸುವ ಸೂಚನೆ ಇದೆ. ಕಾಪು ಕ್ಷೇತ್ರದಲ್ಲಿ ಸೊರಕೆ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲದೇ ಇರುವುದು ಹಾಗೂ ಪಕ್ಷ ಚಟುವಟಿಕೆಗಳಲ್ಲಿ ತಮ್ಮನ್ನು ಅಷ್ಟೊಂದಾಗಿ ತೊಡಗಿಸಿಕೊಂಡಿಲ್ಲದೇ ಇರುವುದು ಅವರ ವಿರುದ್ಧದ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಳ್ತಂಗಡಿ

ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಬಂಗೇರಾ ಸಹೋದರರದ್ದೇ ಕಾರುಬಾರು ಎಂದರೂ ತಪ್ಪಾಗಲಾರದು. ಕಾಂಗ್ರೆಸ್ ಪಕ್ಷ ಇಲ್ಲಿಂದ ಹಾಲಿ ಶಾಸಕ ವಸಂತ್ ಬಂಗೇರಾ ಅವರನ್ನು ಮತ್ತೆ ಕಣಕ್ಕಿಳಿಸಿದ್ದಲ್ಲಿ ಬಿಜೆಪಿ ಅವರ ಸೋದರ ಪ್ರಭಾಕರ್ ಬಂಗೇರಾ ಅವರನ್ನೇ ಎದುರಾಳಿಯಾಗಿಸುವ ಯೋಚನೆಯಲ್ಲಿದೆ. ಇಲ್ಲಿನ ಬಿಲ್ಲವ ಹಾಗೂ ಆದಿವಾಸಿ ಮತದಾರರ ಮೇಲೆ ಇಬ್ಬರು ಸೋದರರೂ ಸಾಕಷ್ಟು ಪ್ರಭಾವ ಬೀರಬಲ್ಲವರಾಗಿದ್ದಾರೆ.

ಸುಳ್ಯ

ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದಲ್ಲಿರುವ ಸುಳ್ಯ ಕ್ಷೇತ್ರ ಮೀಸಲು ಕ್ಷೇತ್ರವಾಗಿಯೇ ಮುಂದಿವರಿದಿದ್ದು, ಇಲ್ಲಿಂದ ಬಿಜೆಪಿಯ ಹಾಲಿ ಶಾಸಕ ಎಸ್ ಅಂಗಾರ ಹಾಗೂ ಕಾಂಗ್ರೆಸ್ ಪಕ್ಷದ ಕುಶಲ ಅವರೇ ಪ್ರಮುಖ ಸ್ಪರ್ಧಾಳುಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಹೊಸ ಮುಖಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆಯೇನಾದರೂ ಮುಂದೆ ಬಂದರೆ ಬಿಜೆಪಿಯು ಅಂಗಾರ ಬದಲು ಬೇರೆ ಯಾರನ್ನಾದರೂ ಕಣಕ್ಕಿಳಿಸುವ ಸಂಭಾವ್ಯತೆ ಅಲ್ಲಗಳೆಯಲಾಗದು ಎನ್ನುತ್ತವೆ ಮೂಲಗಳು. ಆದರೆ ಸುಳ್ಯವೇಕೆ ಇಷ್ಟು ವರ್ಷಗಳ ನಂತರವೂ ಇನ್ನೂ ಮೀಸಲು ಕ್ಷೇತ್ರವಾಗಿ ಉಳಿಯಬೇಕು ಎಂದು ಪ್ರಶ್ನಿಸುತ್ತಿರುವ ಅಲ್ಲಿನ ಮತದಾರರು ಉಳಿದ ಸಮುದಾಯಗಳಿಗೂ ಇಲ್ಲಿ ಪ್ರಾತಿನಿಧ್ಯ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ.

LEAVE A REPLY