ಖಾಲಿ ಬಿದ್ದಿರುವ 4.42 ಲಕ್ಷ ಪೊಲೀಸ್ ಹುದ್ದೆ : ಕರ್ನಾಟಕ ಸಹಿತ 6 ರಾಜ್ಯಕ್ಕೆ ಸುಪ್ರೀಂ ಸಮನ್ಸ್

ಸಾಂದರ್ಭಿಕ ಚಿತ್ರ

ರಾಜ್ಯಗಳಿಗೆ ಸಂಬಂಧಿಸಿ ಸರಕಾರಿ ವಕೀಲರು ಪ್ರತಿ ಬಾರಿಯೂ “ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದುವರಿದಿದೆ” ಎಂದು ಉತ್ತರಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ಇದೇ ಉತ್ತರ ಬರುತ್ತಿದೆಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ : ದೇಶಾದ್ಯಂತ ಪೊಲೀಸ್ ಇಲಾಖೆಯಲ್ಲಿ 4.42 ಲಕ್ಷ ಹುದ್ದೆಗಳು ಖಾಲಿ ಬಿದ್ದಿದ್ದು, ಅತ್ಯಧಿಕ ಹುದ್ದೆಗಳು ಖಾಲಿ ಬಿದ್ದಿರುವ ಆರು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿತು.

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಖೆಹರ್ ಮತ್ತು ಚಂದ್ರಚೂಡ್ ಹಾಗೂ ಸಂಜಯ್ ಕಿಶಾನರಿದ್ದ ನ್ಯಾಯಪೀಠವು ಅತ್ಯಧಿಕ ಸಂಖ್ಯೆಯ ಪೊಲೀಸ್ ಹುದ್ದೆ ಖಾಲಿ ಬಿದ್ದಿರುವ ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ಬಿಹಾರ್, ಜಾರ್ಖಂಡ್, ಕರ್ನಾಟಕ ಮತ್ತು ತಮಿಳುನಾಡಿಗೆ ಸಮನ್ಸ್ ಜಾರಿಗೊಳಿಸಿ ಎಪ್ರಿಲ್ 21ರಂದು ರಾಜ್ಯಗಳ ಗೃಹ ಕಾರ್ಯದರ್ಶಿಗಳು ಅಥವಾ ಜಂಟಿ ಕಾರ್ಯದರ್ಶಿ ಹಾಜರಾಗುವಂತೆ ಸೂಚಿಸಿದೆ.

ಉತ್ತರ ಪ್ರದೇಶದಲ್ಲಿ 3.5 ಲಕ್ಷ ಪೊಲೀಸ್ ಮಂಜೂರಾಗಿದ್ದರೂ, ಅಲ್ಲಿ 1.51 ಲಕ್ಷ ಹುದ್ದೆಗಳು ಖಾಲಿಯದ್ದರೆ, ಪಶ್ಚಿಮ ಬಂಗಾಲದಲ್ಲಿ ಮಂಜೂರಾದ ಪೊಲೀಸ್ ಹುದ್ದೆ 1.02 ಲಕ್ಷವಾಗಿದ್ದು, ಈಗ 37,325 ಪೊಲೀಸರ ಕೊರತೆ ಕಂಡು ಬಂದಿದೆ. ಬಿಹಾರದಲ್ಲಿ 34,251 ಹುದ್ದೆಗಳು ಖಾಲಿ ಬಿದ್ದಿದ್ದು, ಅಲ್ಲಿ ಮಂಜೂರಾಗಿರುವ ಪೊಲೀಸ್ ಬಲ 72,132 ಆಗಿದೆ. ಜಾರ್ಖಂಡದಲ್ಲಿ 81,969 ಹುದ್ದೆಗಳು ಮಂಜೂರಾಗಿದ್ದು, ಈಗ 26,303 ಹುದ್ದೆಗಳು ಬಿದ್ದಿವೆ.

ಕರ್ನಾಟಕದಲ್ಲಿ ಮಂಜೂರಾದ ಪೊಲೀಸ್ ಬಲ 1.02 ಆಗಿದ್ದು, 4,399 ಹುದ್ದೆಗಳು ಭರ್ತಿಯಾಗಿಲ್ಲ. ತಮಿಳುನಾಡಿನಲ್ಲಿ ಮಂಜೂರಾದ ಪೊಲೀಸ್ ಬಲ 1.23 ಲಕ್ಷವಾಗಿದ್ದರೂ, ಅಲ್ಲಿ ಈಗ ಅಲ್ಲಿ 19.803 ಹುದ್ದೆಗಳು ಖಾಲಿ ಇವೆ.

2013ರಲ್ಲಿ ವಕೀಲರೊಬ್ಬರು ಸಲ್ಲಿಸಿದ್ದ ಪಿಎಲ್‍ಐ ಪರಿಗಣಿಸಿದ ಸುಪ್ರೀಂ ಕೋರ್ಟ್ ಕೇಂದ್ರಾಡಳಿತ ಪ್ರದೇಶಗಳ ಸಹಿತ ಎಲ್ಲ ರಾಜ್ಯಗಳಿಗೆ ನೋಟಿಸು ಜಾರಿ ಮಾಡಿದೆ. ಆದರೆ ರಾಜ್ಯಗಳು ಕೋರ್ಟಿಗೆ ಹಾಜರಾಗುವ ಬದಲಾಗಿ, ಖಾಲಿ ಬಿದ್ದಿರುವ ಹುದ್ದೆ ಭರ್ತಿಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದ್ದರೂ, ಅದು ಕೋರ್ಟಿಗೆ ತೃಪ್ತಿ ತಂದುಕೊಟ್ಟಿಲ್ಲ.

“ಕೇಂದ್ರಾಡಳಿತ ಪ್ರದೇಶ ಸಹಿತ ಎಲ್ಲ ರಾಜ್ಯಗಳಲ್ಲಿ ಖಾಲಿ ಬಿದ್ದಿರುವ ಪೊಲೀಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ವಿಷಯದಲ್ಲಿ ವಿಚಾರಿಸಲಿದ್ದೇವೆ. ಆದರೆ ಮೊತ್ತಮೊದಲಾಗಿ ಅತ್ಯಧಿಕ ಪೊಲೀಸ್ ಹುದ್ದೆಗಳು ಖಾಲಿ ಬಿದ್ದಿರುವ ಆರು ರಾಜ್ಯವನ್ನು ಪರಿಗಣಿಸಿದ್ದೇವೆ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ರಾಜ್ಯಗಳಿಗೆ ಸಂಬಂಧಿಸಿ ಸರಕಾರಿ ವಕೀಲರು ಪ್ರತಿ ಬಾರಿಯೂ “ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದುವರಿದಿದೆ” ಎಂದು ಉತ್ತರಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ಇದೇ ಉತ್ತರ ಬರುತ್ತಿದೆಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.