ಬಿಜೆಪಿ ಸಂಸದ, ಶಾಸಕ ಶೀಘ್ರ ಬಂಧನ

ಜಿ ಪರಮೇಶ್ವರ

ಪರಮೇಶ್ವರ್ ಉವಾಚ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಬಿಜೆಪಿ ಶಾಸಕ ರಾಜು ಕಾಗೆ ಮತ್ತು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಯವರನ್ನು ಶೀಘ್ರದಲ್ಲೇ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಯಾರ ವಿರುದ್ಧ ಎಫ್ ಐ ಆರ್ ದಾಖಲಾಗಿದೆಯೋ ಅವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ” ಎಂದರು.
ಆರೋಪಿಗಳ ಬಂಧನ ವಿಳಂಬವಾದಲ್ಲಿ ಆರೋಪಿಗಳು ನಾಪತ್ತೆಯಾಗುವ ಸಾಧ್ಯತೆ ಇರುವುದನ್ನು ಅವರು ಒಪ್ಪಿಕೊಂಡರು.
ಮುಂಬರುವ ಚುನಾವಣಾ ಸಂದರ್ಭದಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆ ನಡೆಯುವ ಮುನ್ಸೂಚನೆಗಳೇನಾದರೂ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಇಲಾಖೆಯು ಅವುಗಳನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಸಿದ್ಧವಾಗುತ್ತಿದೆ. ಜಿಪಿಎಸ್ ಆಧರಿತ ಪೆಟ್ರೋಲಿಂಗ್ ವಾಹನಗಳನ್ನು ಎಲ್ಲಾ ಪೊಲೀಸ್ ಠಾಣೆಗಳಿಗೂ ಮುಂಬರುವ ದಿನಗಳಲ್ಲಿ ಅಳವಡಿಸಲಾಗುವುದು. ಕಂಟ್ರೋಲ್ ಸಿಸ್ಟಂ ಮೂಲಕ ಅದನ್ನು ನಿಯಂತ್ರಿಸಲಾಗುತ್ತದೆ” ಎಂದರು.
“ಜೀವ ಭಯ ಎದುರಿಸುತ್ತಿರುವ ಕಲಾವಿದರು, ಲೇಖಕರು, ರಾಜಕಾರಣಿಗಳಿಗೆ ರಕ್ಷಣೆ ನೀಡುವುದಕ್ಕೆ ಇಲಾಖೆ ಬದ್ಧವಾಗಿದ್ದು, ಅವರ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗುವುದು. ಅವರ ನಿವಾಸಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ನಿಗಾ ಪೊಲೀಸ್ ಇಲಾಖೆ ಇರಿಸುವುದು” ಎಂದರು.
“ಹಿರಿಯ ಸಾಹಿತಿ ಎಂ ಎಂ ಕಲಬುರ್ಗಿ ಹತ್ಯೆ ಬಳಿಕ ಜೀವ ಭಯ ಎದುರಿಸುವ ಲೇಖಕರಿಗೆ ಹೆಚ್ಚಿನ ಭದ್ರತೆ ನೀಡಲು ಇಲಾಖೆ ಮುಂದಾಗಿದೆ” ಎಂದರು.