ಶುಲ್ಕ ವಿನಾಯಿತಿಗೆ ಆಗ್ರಹಿಸಿ ಉ ಕ ಜಿಲ್ಲಾದ್ಯಂತ ರಿಕ್ಷಾ ಚಾಲಕÀರ ಪ್ರತಿಭಟನೆ

ಆಟೋ ಸಂಘದ ಪದಾಧಿಕಾರಿಗಳು ತಹಶೀಲ್ದಾರಗೆ ಮನವಿ ಸಲ್ಲಿಸಿದರು

ನಮ್ಮ ಪ್ರತಿನಿಧಿ ವರದಿ

ಕುಮಟಾ : ಆಟೋ ವೃತ್ತಿಯಲ್ಲಿರುವ ಚಾಲಕರ ಜೀವನ ನಿರ್ವಹಣೆಯೇ ಕಷ್ಟದಾಯಕವಾಗಿದೆ. ಹಿಗಿರುವಾಗ ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಾವು ಸರ್ಕಾರಕ್ಕೆ ಭರಿಸಬೇಕಾದ ಶುಲ್ಕವನ್ನು ವಿಪರೀತ ಜಾಸ್ತಿ ಮಾಡಿದೆ. ಇದರಿಂದ ಆಟೋ ಚಾಲಕರ ಮೇಲೆ ಹೊರೆಯಾಗಿ ಪರಿಣಮಿಸಿದೆ. ಹಾಗಾಗಿ ಆಟೋ ರಿಕ್ಷಾ ಮಾಲಿಕರು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಸೋಮವಾರ ಪ್ಯಾಸೆಂಜರ್ ಆಟೋ ರಿಕ್ಷಾ ಮಾಲಕ-ಚಾಲಕರ ಸಂಘದ ಜಿಲ್ಲಾಧ್ಯಕ್ಷ ಆರ್ ಜಿ ನಾಯ್ಕ ನೇತೃತ್ವದಲ್ಲಿ ತಹಶೀಲ್ದಾರ ಮೇಘರಾಜ ನಾಯ್ಕರಿಗೆ ಮನವಿ ಸಲ್ಲಿಸಿದೆ.

ಆರ್ ಜಿ ನಾಯ್ಕ ಮಾತನಾಡಿ, “ಸಾರ್ವಜನಿಕ ಸೇವೆಯಲ್ಲಿರುವ ಆಟೋ ಚಾಲಕ ಮತ್ತು ಮಾಲಕರಿಗೆ ಸರ್ಕಾರ ಈತನಕ ಯಾವುದೇ ಸೌಲಭ್ಯ ಒದಗಿಸಿಲ್ಲ. ಆಟೋ ವೃತ್ತಿಯಲ್ಲಿ ನಮ್ಮ ಜೀವನ ನಿರ್ವಹಣೆಯೇ ಕಷ್ಟದಾಯಕವಾಗಿರುವಾಗ ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಾವು ಸರ್ಕಾರಕ್ಕೆ ಭರಿಸಬೇಕಾದ ಶುಲ್ಕವನ್ನು ವಿಪರೀತ ಜಾಸ್ತಿ ಮಾಡಿದೆ. ಇದರಿಂದ ಆಟೋ ಚಾಲಕರ ಮೇಲೆ ಹೊರೆಯಾಗಿ ಪರಿಣಮಿಸಿದೆ. ಅಲ್ಲದೆ ಆಟೋ ಚಾಲನ ಪರವಾನಗಿ ಪಡೆಯುವವರು ಕನಿಷ್ಟ 8ನೇ ತರಗತಿ ಉತ್ತೀರ್ಣರಾಗಬೇಕೆಂಬ ಕಾನೂನು ಅಸಂವಿಧಾನಾತ್ಮಕವಾಗಿದೆ. ವಿಮಾ ಮೊತ್ತವನ್ನು ವರ್ಷದಿಂದ ವರ್ಷಕ್ಕೆ ಜಾಸ್ತಿ ಮಾಡುತ್ತಿರುವುದರಿಂದ ರಿಕ್ಷಾ ಚಾಲಕ-ಮಾಲಕರಿಗೆ ತೊಂದರೆ ಉಂಟಾಗಿದೆ. ಹಾಗಾಗಿ ಆಟೋ ಚಾಲಕ ಮತ್ತು ಮಾಲಕರ ಕ್ಷೇಮಾಭಿವೃದ್ಧಿಗೆ ಮುಂದಿನ ಬಜೆಟಿನಲ್ಲಿ ಅನುದಾನ ಕಾಯ್ದಿರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.