ಹೆಚ್ಚುವರಿ ವಸೂಲಿ : ಮರಳಿಗೆ ನಿರ್ದಿಷ್ಟ ದರ ನಿಗದಿಪಡಿಸಿದ ಉ ಕ ಜಿಲ್ಲಾಡಳಿತ

ನಮ್ಮ ಪ್ರತಿನಿಧಿ ವರದಿ

ಕಾರವಾರ :  ಜಿಲ್ಲೆಯ ನದಿಗಳಲ್ಲಿ ದೊರೆಯುವ ಮರಳಿಗೆ ಪರವಾನಗಿದಾರರು ಸಿಕ್ಕಾಪಟ್ಟೆ ವಸೂಲಿ ಮಾಡುತ್ತಿರುವ ದೂರುಗಳು ಸಲ್ಲಿಕೆಯಾಗಿದ್ದರಿಂದ ಜಿಲ್ಲಾಡಳಿತ ನಿರ್ದಿಷ್ಟ ದರ ನಿಗದಿಪಡಿಸುವ ಮೂಲಕ ಮರಳು ಉದ್ಯಮಿಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದೆ.

ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯು ನೋಂದಾಯಿತ ಮರಳು ಉದ್ಯಮಿಗಳಿಗೆ ಪರವಾನಗಿ ನೀಡಿದೆ. ಆದರೆ ಪರವಾನಗಿದಾರರು ಮರಳು ಗ್ರಾಹಕರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಿದ್ದರು. ಅನಿವಾರ್ಯತೆ ಇರುವುದರಿಂದ ಸಾರ್ವಜನಿಕರು ನಷ್ಟವಾದರೂ ಹೆಚ್ಚಿನ ದರಕ್ಕೆ ಮರಳು ಖರೀದಿಸುವ ಅನಿವಾರ್ಯತೆ ಎದುರಾಗಿತ್ತು. ಇದರಿಂದ ಸ್ಥಳೀಯರಿಗೆ ಮರಳು ದೊರೆಯದಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪಾವತಿಸುವ ರಾಜಧನ, ತೆರಿಗೆ, ಮರಳು ತೆಗೆಯುವ, ಲೋಡಿಂಗ್, ಅನ್ ಲೋಡಿಂಗ್, ಕಾರ್ಮಿಕರ ವೇತನ ಹಾಗೂ ನಿಗದಿತ ಸ್ಥಳಕ್ಕೆ ಸಾಗಾಣಿಕಾ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಇವೆಲ್ಲ ಪರಿಗಣಿಸಿ, ಮರಳಿನ ದರವನ್ನು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿಗದಿಪಡಿಸಿದೆ. ಮರಳು ತೆಗೆಯುವ ಮತ್ತು ಲೋಡಿಂಗ್ ವೆಚ್ಚ ಕಾಳಿ ಮತ್ತು ಗಂಗಾವಳಿ ನದಿಗಳಿಗೆ 5,500 ರೂ ಹಾಗೂ ಅಘನಾಶಿನಿ ಹಾಗೂ ಶರಾವತಿ ನದಿಗಳಿಗೆ 7,000 ರೂ ನಿಗದಿಪಡಿಸಲಾಗಿದೆ. ಮತ್ತು ಈ ಎಲ್ಲಾ ನದಿಗಳಿಂದ ಮರಳು ಸಾಗಾಣಿಕೆಗೆ ಪ್ರತಿ ಕಿಮೀ.ಗೆ 60 ಹಾಗೂ ಲೋಡಿಂಗ ಪ್ರದೇಶದಿಂದ 30 ಕಿಮೀ ಒಳಗೆ ಮರಳು ಸಾಗಾಣಿಕೆಗೆ 2,000 ದರವನ್ನು ನಿಗದಿಪಡಿಸಲಾಗಿದೆ.

ಮೇಲೆ ತಿಳಿಸಿರುವುದು 10.0 ಮೆ ಟನ್ ಮರಳಿನ ಗರಿಷ್ಠ ದರವಾಗಿದ್ದು, ಈ ದರಕ್ಕೆ ಸಾಗಾಣಿಕೆದಾರರು/ಪರವಾನಗಿದಾರರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳನ್ನು ಮಾರಾಟ ಮಾಡತಕ್ಕದ್ದು ಎಂದು ಸಮಿತಿ ಸೂಚಿಸಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಸಾಗಾಣಿಕೆದಾರರು ಮತ್ತು ಪರವಾನಗಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಮರಳಿನ ಅಭಾವ ಎದುರಾಗಿದ್ದು, ಸಾರ್ವಜನಿಕರು, ಗುತ್ತಿಗೆದಾರರು ನಿರ್ಮಾಣದ ಅಗತ್ಯಕ್ಕಿಂತ ಹೆಚ್ಚು ಮರಳನ್ನು ದಾಸ್ತಾನು ಇಟ್ಟಿರುವುದು ಕಂಡುಬಂದಲ್ಲಿ ಜಫ್ತು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಸಹಾಯವಾಣಿ 1,077 ಸಂಖ್ಯೆಗೆ ದಾಖಲೆಗಳ ಸಮೇತ ದೂರು ನೀಡಬಹುದಾಗಿದೆ. ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.