ಮೌತ್ ವಾಶ್ ಬಳಸುತ್ತೀರಾ ? ಹಾಗಾದರೆ ಇದನ್ನೊಮ್ಮೆ ಓದಿ

 ಮೌತ್ ವಾಶ್ ಉಪಯೋಗಿಸುವವರು ಮೂರು ವರ್ಷಗಳಲ್ಲಿ ಸಕ್ಕರೆ ಕಾಯಿಲೆ ಅಥವಾ ರಕ್ತದಲ್ಲಿ ಸಕ್ಕರೆಯಂಶ ತೀರಾ ಹೆಚ್ಚಾಗುವ ಪ್ರಿ -ಡಯಾಬಿಟಿಸ್ ಸಮಸ್ಯೆಗೆ ತುತ್ತಾಗುವ ಅಪಾಯ ಇದೆ.

ದಿನಕ್ಕೆ ಕನಿಷ್ಠ ಎರಡು ಬಾರಿ ಮೌತ್ ವಾಶ್ ಉಪಯೋಗಿಸುವ ಅಭ್ಯಾಸ ನಿಮಗಿದೆಯೇ ? ಹೌದೆಂದಾದರೆ ನೀವು ಈ ಅಭ್ಯಾಸವನ್ನು ಆದಷ್ಟು ಬೇಗ ಕೈಬಿಡುವುದೇ ಒಳ್ಳೆಯದು. ಏಕಂತೀರಾ ? ಇಂತಹ ಒಂದು ಅಭ್ಯಾಸ ನಿಮಗೆ ಸಕ್ಕರೆ ಕಾಯಿಲೆ ಅಥವಾ ಡಯಾಬಿಟೀಸ್ ತಟ್ಟುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚೆಗೆ ನಡೆಸಲಾದ ಅಧ್ಯಯನವೊಂದರಿಂದ ಬಹಿರಂಗಗೊಂಡಿದೆ.

ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ರಿಸರ್ಚರ್ಸ್ ಪ್ರಕಾರ ದಿನಕ್ಕೆ ಕನಿಷ್ಠ ಎರಡು ಬಾರಿ ಮೌತ್ ವಾಶ್ ಉಪಯೋಗಿಸುವವರು ಮೂರು ವರ್ಷಗಳಲ್ಲಿ ಸಕ್ಕರೆ ಕಾಯಿಲೆ ಅಥವಾ ರಕ್ತದಲ್ಲಿ ಸಕ್ಕರೆಯಂಶ ತೀರಾ ಹೆಚ್ಚಾಗುವ ಪ್ರಿ-ಡಯಾಬಿಟಿಸ್ ಸಮಸ್ಯೆಗೆ ತುತ್ತಾಗುವ ಅಪಾಯ ಶೇ 55ರಷ್ಟು ಹೆಚ್ಚಾಗುತ್ತದೆ.

ಮೌತ್ ವಾಶ್ ದ್ರಾವಣ ಬ್ಯಾಕ್ಟಿರಿಯಾ ನಿರೋಧಕವಾಗಿರುವುದರಿಂದ ಅದರಲ್ಲಿ ಬಾಯಿ ಮುಕ್ಕಳಿಸಿದಾಗ ಕೆಲವೊಮ್ಮೆ ನಮ್ಮ ಬಾಯಿಯಲ್ಲಿರುವ ಉಪಯುಕ್ತ ಮೈಕ್ರೋಬ್ಸ್ ಕೂಡ ನಾಶವಾಗುವುದೇ ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಜನಪ್ರಿಯ ಮೌತ್ ವಾಶ್ ಉತ್ಪನ್ನಗಳೂ ಒಳ್ಳೆಯ ಮತ್ತು ಹಾನಿಕಾರಕÀ ಬ್ಯಾಕ್ಟೀರಿಯ ಎರಡನ್ನೂ ನಾಶಪಡಿಸುತ್ತವೆ. ಅಧ್ಯಯನದ ಭಾಗವಾಗಿ 40ರಿಂದ 65 ವರ್ಷ ವಯೋಮಿತಿಯ ಹಾಗೂ ಈ ಹಿಂದೆ ಯಾವುದೇ ಹೃದಯ ಸಂಬಂಧಿ ಅಥವಾ ಡಯಾಬಿಟೀಸ್ ಸಮಸ್ಯೆ ಬಾಧಿಸದ 1,206 ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಇವರಲ್ಲಿ ಶೇ 43ರಷ್ಟು ಮಂದಿ ಕನಿಷ್ಠ ದಿನಕ್ಕೊಂದು ಬಾರಿ ಮೌತ್ ವಾಶ್ ಉಪಯೋಗಿಸುತ್ತಿದ್ದರೆ, ಶೇ 22ರಷ್ಟು

ಮಂದಿ ದಿನಕ್ಕೆ ಕನಿಷ್ಠ ಎರಡು ಬಾರಿ ಮೌತ್ ವಾಶ್ ಉಪಯೋಗಿಸುತ್ತಿದ್ದರು. ಕ್ರಮೇಣ ಎರಡೂ ವಿಭಾಗದವರು ಸಕ್ಕರೆ ಕಾಯಿಲೆ ಸಮಸ್ಯೆ ಎದುರಿಸುವ ಅಪಾಯವೆದುರಿಸುತ್ತಿರುವುದು ಕಂಡು ಬಂತು.

ಸಾಮಾನ್ಯವಾಗಿ ನಮ್ಮ ಬಾಯಿಯಲ್ಲಿರುವ ಉಪಯುಕ್ತ ಬ್ಯಾಕ್ಟೀರಿಯಾಗಳು ಸ್ಥೂಲಕಾಯತೆ ಹಾಗೂ ಡಯಾಬಿಟೀಸ್ ವಿರುದ್ಧ  ರಕ್ಷಣೆಯೊದಗಿಸಿ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಕರಿಸುತ್ತವೆ. ಇದು ನಮ್ಮ ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಉಪಯುಕ್ತ ಬ್ಯಾಕ್ಟೀರಿಯಾಗಳು ನಾಶವಾಗುತ್ತಿದ್ದಂತೆಯೇ ಹಾನಿಕಾರಕ ಬ್ಯಾಕ್ಟೀರಿಯಾಗಳು ಅಲ್ಲಿ ನೆಲೆಯೂರಿ ಸಮಸ್ಯೆ ಒಡ್ಡುತ್ತವೆ.

ಆದುದರಿಂದ ದಿನಕ್ಕೊಂದು ಬಾರಿ ಮಾತ್ರ ಮೌತ್ ವಾಶ್ ಉಪಯೋಗಿಸಿ ಬಾಯಿ ಮುಕ್ಕಳಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಈ ಸಂಶೋಧನಾ ವರದಿ ನೈಟ್ರಿಕ್ ಆಕ್ಸೈಡ್ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

 

LEAVE A REPLY