ಪಾಕ್ ಮೇಲೆ ಪರಿಣಾಮ ಬೀರದ ಅಮೆರಿಕದ ಬೆದರಿಕೆ

  •  ಎಂ ಕೆ ಭದ್ರಕುಮಾರ್

ಹೊಸ ವರ್ಷದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಆಘಾತಕಾರಿ ಹೇಳಿಕೆಯ ಹೊರತಾಗಿಯೂ ಪಾಕಿಸ್ತಾನ ತನ್ನ ಕಠಿಣ ನಿಲುವನ್ನು ಬದಲಿಸಿಲ್ಲ. ಕಳೆದ ವಾರ ಪಾಕಿಸ್ತಾನದ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಯಲ್ಲಿ ಅಮೆರಿಕದ ಏಕಪಕ್ಷೀಯ ನಿರ್ಧಾರಗಳು ಮತ್ತು ಬದಲಾಗುವ ನಿಲುವುಗಳು ಪ್ರತಿಕೂಲ ಪರಿಸ್ಥಿತಿ ನಿರ್ಮಿಸುತ್ತದೆ ಎಂದು ಹೇಳಿದ್ದಾರೆ. ಆದಾಗ್ಯೂ ಮಾತುಕತೆಗಳ ಸಾಧ್ಯತೆಗಳನ್ನು ಪಾಕ್ ಸರ್ಕಾರ ತಳ್ಳಿಹಾಕಿಲ್ಲ. ಈ ಕುರಿತು ಯಾವುದೇ ಚರ್ಚೆ ನಡೆಸಲು ಅಮೆರಿಕದ ಪೆಂಟಗನ್ ವಕ್ತಾರರು ನಿರಾಕರಿಸಿರುವುದೂ ಪಾಕಿಸ್ತಾನದ ಬಿಗಿ ನಿಲುವಿನ ಪರಿಣಾಮವೇ ಆಗಿದೆ. ಏತನ್ಮಧ್ಯೆ ಪಾಕಿಸ್ತಾನಕ್ಕೆ ಭದ್ರತಾ ನೆರವು ಮತ್ತು ವಿದೇಶಿ ಸೇನಾ ಹಣಕಾಸು ಯೋಜನೆಯಡಿ ಸಹಾಯವನ್ನು ಸ್ಥಗಿತಗೊಳಿಸುವ ಅಮೆರಿಕದ ನಿಲುವಿನಿಂದ ಪಾಕಿಸ್ತಾನಕ್ಕೆ ಒದಗಬೇಕಿದ್ದ 1.3 ಬಿಲಿಯನ್ ಡಾಲರ್ (9800 ಕೋಟಿ ರೂ) ವಾರ್ಷಿಕ ಅನುದಾನಕ್ಕೆ ಕತ್ತರಿ ಬಿದ್ದಂತಾಗಿದೆ.

ಆಫ್ಘಾನಿಸ್ತಾನದ ಮೂಲದಿಂದ ಪಾಕಿಸ್ತಾನ ಎದುರಿಸುತ್ತಿರುವ ಗಡಿ ಭಯೋತ್ಪಾದನೆಯನ್ನು ನಿಯಂತ್ರಿಸಲು ಅಮೆರಿಕ ವಿಫಲವಾಗಿದೆ ಎಂದು ಪಾಕ್ ಸರ್ಕಾರ ಆರೋಪಿಸುತ್ತಲೇ ಇದೆ. ಅಮೆರಿಕದ ಇತ್ತೀಚಿನ ನಿಲುವಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಘ್ಫಾನಿಸ್ಥಾನದಲ್ಲಿ ಅಮೆರಿಕದ ಸೇನೆಗೆ ಯಾವುದೇ ಬೆಂಬಲ ನೀಡದೆಯೂ ಇರಬಹುದು. ಮತ್ತೊಂದೆಡೆ  ಆಫ್ಘಾನಿಸ್ತಾನದಲ್ಲಿ ಶಾಶ್ವತ ರಾಜಕೀಯ ಒಡಂಬಡಿಕೆಗೂ ಅಮೆರಿಕ ಹಿಂಜರಿಯುತ್ತಿದೆ. ಏಕೆಂದರೆ ಹಾಗಾದಲ್ಲಿ ಅಮೆರಿಕ ತನ್ನ ಸೇನೆಯನ್ನು ವಾಪಸ್ ಪಡೆಯಬೇಕಾಗುತ್ತದೆ. ಚೀನಾ ಪಾಕಿಸ್ತಾನಕ್ಕೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ದಿಟ್ಟ ನಿಲುವು ತಾಳುವ ಸಾಧ್ಯತೆಗಳು ಹೆಚ್ಚಾಗಿವೆ. ಇತ್ತೀಚೆಗೆ ಇರಾನ್ ಮತ್ತು ಪಾಕಿಸ್ತಾನದ ಭದ್ರತಾ ಸಲಹೆಗಾರರು ಪರಸ್ಪರ ಮಾತುಕತೆ ನಡೆಸಿರುವುದು ಈ ಸಂದರ್ಭದಲ್ಲಿ ಮಹತ್ವ ಪಡೆಯುತ್ತದೆ. ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಆಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂಪಡೆಯುವುದೂ ಅಮೆರಿಕಕ್ಕೆ ಕಷ್ಟವಾಗುವ ಸಾಧ್ಯತೆಗಳನ್ನು ಪಾಕಿಸ್ತಾನ ಸೃಷ್ಟಿಮಾಡಬಹುದಾಗಿದೆ.

 

LEAVE A REPLY