ಇಂದು ಉಪ್ಪಿಯ ಹೊಸ ಪಕ್ಷ ಉದಯ?

ಇಷ್ಟು ದಿನ ತೆರೆಯ ಮೇಲೆ ರಿಯಲ್ ಸ್ಟಾರ್ ಎನಿಸಿಕೊಂಡ ಉಪೇಂದ್ರ ಇನ್ನು ರಾಜಕೀಯ ರಂಗದಲ್ಲೂ ಸ್ಟಾರ್ ಆಗಿ ಮೆರೆಯುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ ರಂಗು ರಂಗಾಗಿ ಕೇಳಿಬರುತ್ತಿದೆ.

ಉಪೇಂದ್ರ ರಾಜಕೀಯಕ್ಕೆ ಧುಮುಕುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರಂತೆ. ಉಪೇಂದ್ರ ತಮ್ಮ ಸ್ವಂತ ಪಕ್ಷ ಸ್ಥಾಪನೆ ಮಾಡುತ್ತಾರೆ ಎಂಬ ಸುದ್ದಿಯೂ ಜೋರಾಗಿದೆ. ಇನ್ನೊಂದು ಮೂಲದ ಪ್ರಕಾರ ಉಪೇಂದ್ರನಿಗೆ ಮೋದಿ ಮೇಲೆ ದೊಡ್ಡ ಅಭಿಮಾನ ಇದೆ. ಜೊತೆಗೆ ಇಂದು ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಾ ಇದ್ದಾರೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ಬಿಜೆಪಿಗೆ ಸೇರುತ್ತಾರಾ ಎಂಬ ಅನುಮಾನವೂ ಇದೆ. ಅಂತೂ ಉಪೇಂದ್ರ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎನ್ನುತ್ತವೆ ಅವರ ಆಪ್ತ ಮೂಲ. ಟಿ.ಎನ್. ಸೀತಾರಾಮ್ ಅವರ ಜೊತೆ ಉಪೇಂದ್ರ ರಾಜಕೀಯದ ಬಗ್ಗೆ ಚರ್ಚಿಸಿದ್ದಾರೆಯಂತೆ. ಟಿ.ಎನ್. ಸೀತಾರಾಮ್ ಈ ಬಗ್ಗೆ ಮಾತಾಡುತ್ತಾ ಒಳ್ಳೆಯ ವಿಚಾರಧಾರೆ, ವೈಯಕ್ತಿಕ ಪ್ರಾಮಾಣಿಕತೆ ಇರುವ ಉಪೇಂದ್ರ ರಾಜಕೀಯಕ್ಕೆ ಬರುವುದು ಉತ್ತಮ ಎನ್ನುತ್ತಾರೆ.

ಟ್ವಿಟ್ಟರಿನಲ್ಲಿ ಉಪ್ಪಿ ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಐಟಿ ರೈಡ್, ಜಿ.ಎಸ್.ಟಿ, ನೋಟ್ ಬ್ಯಾನ್ ವಿಷಯಕ್ಕೆ ಉಪೇಂದ್ರ ಟ್ವೀಟ್ ಮಾಡಿದ್ದು ರಾಜಕೀಯ ಎಂಟ್ರಿಯ ಮುನ್ನುಡಿ ಎನ್ನಬಹುದು. ಅದಲ್ಲದೇ ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕ್ ಪಾಲ್ ಮಸೂದೆ ಜಾರಿಗೆ ದೇಶಾದ್ಯಂತ ನಡೆದ ಹೋರಾಟದಲ್ಲಿ ಉಪೇಂದ್ರ ಭಾಗಿಯಾಗಿದ್ದರು. ಉಪ್ಪಿ ಕಳೆದ ವಾರವಷ್ಟೇ “ರಾಜಕಾರಣ, ರಾಜಕೀಯ, ರಾಜನೀತಿ ನಮಗೆ ಬೇಕಿಲ್ಲ, ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ನಮಗೆ ಬೇಕಿರುವುದು. ಪ್ರಜಾಪ್ರಭುತ್ವದಲ್ಲಿ ಕೀ ಪ್ರಜೆಗಳ ಕೈಯಲ್ಲಿರಬೇಕು. ರಾಜರ ಕೈಯಲ್ಲಿ ಅಲ್ಲ್ಲ” ಎಂದು ತಮ್ಮದೇ ಸ್ಟೈಲಿನಲ್ಲಿ ಟ್ವೀಟ್ ಮಾಡಿದ್ದು ಭಾರೀ ವೈರಲ್ ಆಗಿತ್ತು.