ಯು ಪಿ ಫಲಿತಾಂಶ : ಸಿದ್ದರಾಮಯ್ಯ ಜಾಗೃತರಾಗಲಿ

* ನಾ ದಿವಾಕರ
………………….
ಭಾರತದ ಮತದಾರರು ಪ್ರಬುದ್ಧರಾಗಿದ್ದಾರೆ. ಆಮಿಷಗಳಿಗೆ ಬಲಿಯಾದರೂ ಸಹ ತಮ್ಮ ಬತ್ತಳಿಕೆಯಲ್ಲಿರುವ ಮತ ಎನ್ನುವ ಅಸ್ತ್ರದ ಮಹತ್ವವನ್ನು ಅರಿತಿದ್ದಾರೆ. ತಾವು ಔದಾರ್ಯದಿಂದ ನೀಡಿದ ಭಿಕ್ಷೆಗೆ ಅಥವಾ ಭಾಗ್ಯಗಳ ಮಾಲೆಗೆ ಜನಸಾಮಾನ್ಯರು ಮರುಳಾಗಿ ಶರಣಾಗುತ್ತಾರೆ ಎಂಬ ಭ್ರಮೆ ಇನ್ನು ರಾಜಕಾರಣಿಗಳಿಗೆ ಬೇಕಿಲ್ಲ. ಈ ದೇಶದ ಜನತೆಗೆ ಬೇಕಿರುವುದು ರಾಜಕೀಯ ಪರ್ಯಾಯ ಮತ್ತು ಅಸ್ಪಷ್ಟತೆ ಇಲ್ಲದ, ಅಸ್ಥಿರತೆ ಇಲ್ಲದ ರಾಜಕಾರಣ.
ಜಾತಿ ರಾಜಕಾರಣ ತನ್ನ ಪರಾಕಾಷ್ಠೆ ತಲುಪಿರುವ ಈ ಸಂದರ್ಭದಲ್ಲಿ ಜಾತಿಗಳ ಸಮೀಕರಣ, ವಿಭಿನ್ನ ಜಾತಿಗಳ ಸಮ್ಮಿಲನ ಮತ್ತು ಕ್ರೋಢೀಕರಣ ಸಾಧ್ಯ ಎನ್ನುವುದನ್ನು ಇತ್ತೀಚಿನ ಹಲವು ಚುನಾವಣೆಗಳು ನಿರೂಪಿಸಿವೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಈ ನಿಟ್ಟಿನಲ್ಲಿ ಒಂದು ದಿಕ್ಸೂಚಿ.
ಕರ್ನಾಟಕ ಮುಂದಿನ ವರ್ಷ ಚುನಾವಣೆಗಳನ್ನು ಎದುರಿಸಲಿದೆ. ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಂಡು ಸಿದ್ಧರಾಮಯ್ಯ ಮತ್ತೊಮ್ಮೆ ಆಧಿಕಾರಕ್ಕೆ ಬರಲು ಕನಸು ಕಾಣುತ್ತಿದ್ದಾರೆ. ಆದರೆ ಪಂಜಾಬ್ ಮತ್ತು ಉತ್ತರ ಪ್ರದೇಶ ಫಲಿತಾಂಶಗಳು ಅಹಿಂದ ನೇತಾರ ಮುಖ್ಯಮಂತ್ರಿಗೆ ತಕ್ಕ ಪಾಠ ಕಲಿಸದೆ ಹೋದರೆ 2018ರಲ್ಲಿ ಅಹಿಂದ ಒತ್ತಟ್ಟಿಗಿರಲಿ, ಹಿಂದು ಮುಂದಿಲ್ಲದ ನಾಯಕರಾಗಿ ಕೊನೆಗೊಳ್ಳಬೇಕಾಗುತ್ತದೆ.
ಯಡ್ಡಿಯೂರಪ್ಪ ಮತ್ತು ಸಂಗಡಿಗರ ಭ್ರಷ್ಟಾತಿಭ್ರಷ್ಟ ಆಡಳಿತ ಮತ್ತು ಭ್ರಷ್ಟಾಧಿಪತಿಗಳ ಅಬ್ಬರಾಟದಿಂದ ಬೇಸತ್ತು ಹೋಗಿದ್ದ ಕರ್ನಾಟಕದ ಜನತೆಗೆ 2013ರಲ್ಲಿ ಬೇಕಾಗಿದ್ದುದು ಪರ್ಯಾಯ ರಾಜಕಾರಣವಲ,್ಲ ಒಂದು ಬದಲಿ ಸರ್ಕಾರ ಅಷ್ಟೇ ಆಗಿತ್ತು. ಆ ಬದಲಿ ಸರ್ಕಾರದಲ್ಲಿ ಗದ್ದುಗೆ ಹಿಡಿದಿದ್ದು ಸಿದ್ಧರಾಮಯ್ಯ. ಈ ಪ್ರಕ್ರಿಯೆಗಳಿಗೆ ಕಾರಣ ಜಾತಿ ಇರಲಿ ಅಥವಾ ಪಕ್ಷವನ್ನು ಉಳಿಸುವ ಅನಿವಾರ್ಯತೆ ಇರಲಿ, ಸಿದ್ಧರಾವiಯ್ಯ ಸರ್ಕಾರ ಮುಂದಿದ್ದ ಒಂದು ಬೃಹತ್ ಸವಾಲು ಕರ್ನಾಟಕವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಮತ್ತು ಪ್ರಾಮಾಣಿಕ ಆಡಳಿತ ನಡೆಸುವುದಾಗಿತ್ತು.
ಈ ಎರಡು ವಿಚಾರಗಳಲ್ಲಿ ಸಿದ್ಧರಾಮಯ್ಯ ಯಶಸ್ವಿಯಾಗಿದ್ದಾರೆಯೇ ಎಂಬ ಪ್ರಶ್ನೆ ಎದುರಾದಾಗ ಕರ್ನಾಟಕದ ಜನತೆಯ ಮುಂದೆ ಮತ್ತೊಂದು ಬದಲಿ ಸರ್ಕಾರದ ಆಯ್ಕೆ ಸೃಷ್ಟಿಯಾಗುತ್ತದೆ. ಅನ್ನ, ಕ್ಷೀರ, ತಾಳಿ, ಹಾಲು, ಬುರ್ಖಾ ಭಾಗ್ಯಗಳು ಜನರ ಕ್ಷಣಿಕ ಹಸಿವನ್ನು ನೀಗಿಸಬಹುದು. ಆದರೆ ಅದು ಉತ್ತಮ ಆಡಳಿತದ ಲಕ್ಷಣ ಎನಿಸುವುದಿಲ್ಲ. ಔದಾರ್ಯದ ಜೋಳಿಗೆಯಿಂದಲೇ ಮತದಾರರನ್ನು ಗೆಲ್ಲುವ ಪರಂಪರೆ 1990ರ ದಶಕದ ನಂತರದಲ್ಲಿ ಅವಸಾನದತ್ತ ಸಾಗುತ್ತಿದೆ. ನುರಿತ ರಾಜಕಾರಣಿಯಾದ ಸಿದ್ಧರಾಮಯ್ಯ ಈ ವಾಸ್ತವವನ್ನು ಗ್ರಹಿಸದೆ ಹೋದರೆ ಬಹುಶಃ ಕರ್ನಾಟಕದಲ್ಲಿ ಮುಂದಿನ ವರ್ಷ ಮತ್ತೊಬ್ಬ ಅಖಿಲೇಶ್ ಕಾಣಬಹುದು.
ಸಿದ್ಧರಾಮಯ್ಯ ಆಡಳಿತದಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ಹಗರಣಗಳು ನಡೆದಿಲ್ಲ ಎಂದು ಏಕೆ ಭಾಸವಾಗುತ್ತದೆ ? ಏಕೆಂದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಹೊರತುಪಡಿಸಿ ಬೇರೇನೂ ಸಂಭವಿಸಲೇ ಇಲ್ಲ. ಹಾಗಾಗಿ ಕೊಳೆತ ತರಕಾರಿಗಿಂತಲೂ ಒಣಗಿದ ತರಕಾರಿ ಒಳ್ಳೆಯದು ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಆದರೆ ಒಣಗಿದ ಹುರುಳಿಯನ್ನು ಎಷ್ಟು ಹೊತ್ತು ಮೇಯಲು ಸಾಧ್ಯ ? ಹಸಿರು ಹುರುಳಿಗಾಗಿ ಮನಸು ಹಾತೊರೆಯುತ್ತದೆ. ಕೊಳೆತ ಮನಸುಗಳೇ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮಿಂದು ಪರಿಶುದ್ಧರಾಗಿ ಮತ್ತೊಮ್ಮೆ ಮತದಾನದ ಬ್ರಹ್ಮಕಪಾಲ ಹಿಡಿದು ಎದುರು ನಿಂತರೆ ಬಹುಶಃ ಕರ್ನಾಟಕದ ಜನತೆ ಭಾಗ್ಯಗಳ ಸರಮಾಲೆಯನ್ನು ಕಿತ್ತೊಗೆದು ಮಾಜಿ ಭ್ರಷ್ಟರಿಗೆ ಮತ್ತೊಂದು ಅವಕಾಶ ನೀಡಲೂಬಹುದು.
ಈಗಾಗಲೇ ದಕ್ಷಿಣ ಕನ್ನಡದ ಜಯಪ್ರಕಾಶ ಹೆಗ್ಡೆ, ಮಲೆನಾಡಿನ ಕುಮಾರ್ ಬಂಗಾರಪ್ಪ, ಸ್ವಕ್ಷೇತ್ರ ಮೈಸೂರಿನ ಶ್ರೀನಿವಾಸ್ ಪ್ರಸಾದ್, ಮಂಡ್ಯದ ಎಸ್ ಎಂ ಕೃಷ್ಣ ಸಿದ್ಧರಾಮಯ್ಯನವರ ರಥದ ಗಾಲಿಗಳನ್ನು ಮುರಿದಿದ್ದಾರೆ. ಜನಾರ್ಧನ ಪೂಜಾರಿ, ವಿಶ್ವನಾಥ್ ಅವರಂತಹ ಪಕ್ಷದ ಹಿರಿಯರು ಮೂಲೆಗುಂಪಾಗಿದ್ದು ಅತಂತ್ರ ಸ್ಥಿತಿಯಲ್ಲಿದ್ದಾರೆ. ರಾಜಕಾರಣಿಯ ಅತಂತ್ರ ಸ್ಥಿತಿ ಮತಾಂತರದ ಮುನ್ನ ಉಂಟಾಗುವ ಪ್ರಸವವೇದನೆಗೆ ಮೂಲ ಎಂಬ ಸತ್ಯ ಸಿದ್ಧರಾಮಯ್ಯನವರಿಗೆ ಅರ್ಥವಾಗಬೇಕು.
ವಾಚ್ ಹಗರಣ, ಕಪ್ಪತ್ತಗುಡ್ಡ ವಿವಾದ, ಕುಟುಂಬ ರಾಜಕಾರಣ ಮತ್ತು ಜನಸಾಮಾನ್ಯರ ನಿತ್ಯ ಸಮಸ್ಯೆಗಳ ನಿರ್ಲಕ್ಷ್ಯ ಇವೆಲ್ಲವೂ ಸಿದ್ದು ಸರ್ಕಾರದ ಋಣಾತ್ಮಕ ಅಂಶಗಳು. ಖರ್ಗೆ, ಧರಂಸಿಂಗ್, ದೇಶಪಾಂಡೆ, ಸ್ವತಃ ಸಿದ್ಧರಾಮಯ್ಯ ಕುಟುಂಬ ರಾಜಕಾರಣದ ಪರಂಪರೆಯನ್ನು ಮುಂದುವರೆಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಈ ದರಿದ್ರ ಪರಂಪರೆಯ ಭವಿಷ್ಯವನ್ನು ರಾಹುಲ್ ಗಾಂಧಿ ಯುಪಿ ಚುನಾವಣೆಯಲ್ಲಿ ಸ್ಪಷ್ಟಪಡಿಸಿದ ನಂತರವೂ ಎಚ್ಚೆತ್ತುಕೊಳ್ಳದಿದ್ದರೆ ಸಿದ್ಧರಾಮಯ್ಯ ಮತ್ತು ಸಂಗಡಿಗರಿಗೆ ಕುಟುಂಬ ಭಜನೆಯೇ ಅಂತಿಮ ತಾಣವಾಗಬಹುದು.
ಮಧುಗಿರಿ, ಗುಡಿಬಂಡೆ, ಸವಣೂರು ಪ್ರಕರಣಗಳು, ಸಫಾಯಿ ಕರ್ಮಚಾರಿಗಳ ಸಾವು ಮತ್ತು ನಿತ್ಯ ಕರ್ಮಕಾಂಡ, ದಲಿತರ ಮೇಲಿನ ದೌರ್ಜನ್ಯ, ಕರಾವಳಿಯಲ್ಲಿ ಕೋಮುವಾದಿಗಳ ಅಟ್ಟಹಾಸ ಇದಾವುದನ್ನೂ ಸಮರ್ಥವಾಗಿ ನಿರ್ವಹಿಸಲು ಕರ್ನಾಟಕ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕಾವೇರಿ ವಿವಾದ, ಮಹಾದಾಯಿ ವಿವಾದ, ನೇತ್ರಾವತಿ ವಿವಾದ ನಿತ್ಯಸಮಸ್ಯೆಗಳಾಗಿವೆ. ಮೇವು ಮತ್ತು ನೀರು ಗ್ರಾಮೀಣ ಜನತೆಯ ಮುಂದಿನ ಬೃಹತ್ ಸವಾಲುಗಳಾಗಿವೆ. ಈ ಎಲ್ಲ ಜ್ವಲಂತ ಸಮಸ್ಯೆಗಳನ್ನೂ ಪರಿಹರಿಸುವಂತಹ ಧೀಮಂತ ರಾಜಕೀಯ ಪರ್ಯಾಯ ನಾಯಕ ಕರ್ನಾಟಕದಲ್ಲಿ ಕಾಣುತ್ತಿಲ್ಲ. ಸಿದ್ಧರಾಮಯ್ಯ ಈ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಪ್ರಬುದ್ಧತೆಯನ್ನೂ ಪ್ರದರ್ಶಿಸಿಲ್ಲ.
ಈ ಅತಂತ್ರ ಸ್ಥಿತಿಯಲ್ಲೇ 2018 ಸಮೀಪಿಸುತ್ತಿದೆ. ಯುಪಿ ಚುನಾವಣೆ ನಿದ್ರಾವಸ್ಥೆಯನ್ನು ಭಂಗಗೊಳಿಸದೆ ಹೋದರೆ ಚಿರನಿದ್ರೆಯೇ ಪರ್ಯಾಯ.