ಉ ಪ್ರ ಚುನಾವಣೆ : ಯಾರಿಗೆ ಮೇಲುಗೈ ? ಊಹಿಸುವುದೂ ಕಷ್ಟಸಾಧ್ಯ !

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ದಿನಾಂಕವನ್ನು ಮುಖ್ಯ ಚುನಾವಣಾ ಆಯುಕ್ತರು  ಈಗಾಗಲೇ ಘೋಷಣೆ ಮಾಡಿರುವುದರಿಂದ  ಈ ಚುನಾವಣೆಯ ಫಲಿತಾಂಶದ ದಿನವಾದ ಮಾರ್ಚ್ 11 ಭಾರತದ ರಾಜಕೀಯ ಇತಿಹಾಸದಲ್ಲಿ  ಸ್ಮರಣೀಯ ದಿನವಾಗಲಿದೆ. 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 7 ರೇಸ್ ಕೋರ್ಸ್ ರೋಡ್ ವಿಳಾಸಕ್ಕೆ ನಡೆಯುವ ಸ್ಪರ್ಧೆಯಲ್ಲಿ ಯಾರೆಲ್ಲ ಉಳಿಯುತ್ತಾರೆಂದು ಈ ಚುನಾವಣಾ ಫಲಿತಾಂಶ ಬಹುತೇಕ ನಿರ್ಧರಿಸಲಿದೆ.

ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ತನ್ನ ಪ್ರಭಾವ ಬೀರಲಿದ್ದರೆ, ಗೋವಾ, ಪಂಜಾಬ್ ಹಾಗೂ ಮಣಿಪರದ ಚುನಾವಣೆಗಳ ಫಲಿತಾಂಶಗಳ ಪ್ರಭಾವವನ್ನೂ ನಗಣ್ಯಗೊಳಿಸಲಾಗುವುದಿಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ 71ರಲ್ಲಿ ಜಯಭೇರಿ ಬಾರಿಸಿತ್ತು. ಮೋದಿ ಅಲೆ ಬಿಎಸ್ಪಿ ಹಾಗೂ ಎಸ್ಪಿಗಳನ್ನು ಹೇಳಹೆಸರಿಲ್ಲದಂತೆ ಮಾಡಿತ್ತು. ಶೇ 81ರಷ್ಟು ಮತ ಗಳಿಸಿ ಸಾಧಿಸಿದ  ವಿಜಯವು 1977ರಲ್ಲಿ ತುರ್ತುಪರಿಸ್ಥಿತಿ ನಂತರದ ಬೆಳವಣಿಗೆಯಲ್ಲಿ ಜನತಾ ಪಕ್ಷ ದಾಖಲಿಸಿತ್ತು.

ಸಮಾಜವಾದಿ ಪಕ್ಷದ 1.8 ಕೋಟಿ ಹಾಗೂ ಬಿಎಸ್ಪಿಯ  1.59 ಕೋಟಿ ಮತಗಳಿಗೆ ಹೋಲಿಸಿದಲ್ಲಿ ಬಿಜೆಪಿ 3.43 ಕೋಟಿ ಮತಗಳನ್ನು ಉತ್ತರ ಪ್ರದೇಶದಲ್ಲಿ ಹೇಗೆ ಬಾಚಿಕೊಳ್ಳಲು ಯಶಸ್ವಿಯಾಯಿತೆಂಬ ಪ್ರಶ್ನೆಗೆ ಇಲ್ಲಿಯತನಕ ಹಲವರು ಉತ್ತರಕ್ಕಾಗಿ ತಡಕಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದಲಿತರ ಮತಗಳನ್ನು ಸೆಳೆಯಲು ಸಫಲವಾಗಿ ತಾನು ಕೇವಲ ಮೇಲ್ಜಾತಿಯವರ ಪಕ್ಷವೆಂಬ ಭಾವನೆ ಹೋಗಲಾಡಿಸಲು ಸ್ವಲ್ಪ ಮಟ್ಟಿನ ಯಶಸ್ಸು ಕಳೆದ ಲೋಕಸಭಾ ಚುನಾವಣೆಯಲ್ಲಿ  ಸಾಧಿಸಿತ್ತು.

ಆದರೆ  ಈ ಹೊಸ ವರ್ಷ 2014ರಂತಲ್ಲ. ಈ ನಡುವೆ ಗಂಗೆಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅಮಿತ್ ಶಾ ಅವರ ಭೋಜನಕೂಟ ರಾಜಕೀಯವಿರಬಹುದು ಇಲ್ಲವೇ  ಪ್ರಧಾನಿ ಮೊಬೈಲ್ ಅಪ್ಲಿಕೇಶನ್ ಒಂದಕ್ಕೆ ಭೀಮ್  (ದಲಿತ ನಾಯಕ ಬಿ ಆರ್ ಅಂಬೇಡ್ಕರ್) ಹೆಸರಿಟ್ಟಿರುವ ವಿಚಾರವಿರಬಹುದು, ಬಿಜೆಪಿ 2014ರಲ್ಲಿ ತನ್ನ ಗೆಲುವಿಗೆ ಕಾರಣವಾದ ಅಂಶಗಳನ್ನು ಹತಾಶೆಯಿಂದ ಗಟ್ಟಿಯಾಗಿ ಹಿಡಿದುಕೊಳ್ಳಲು ಯತ್ನಿಸುತ್ತಿರುವುದು ಸ್ಪಷ್ಟ. ಆದರೂ ರೋಹಿತ್ ವೇಮುಲಾ ಆತ್ಮಹತ್ಯೆ ಹಾಗೂ ದಲಿತರ ಮೇಲೆ ಗೋರಕ್ಷಕರು ನಡೆಸಿದ ಅಮಾನುಷ ದೌರ್ಜನ್ಯಗಳ ಪರಿಣಾಮಗಳ ಬಗ್ಗೆ ಬಿಜೆಪಿಯಲ್ಲಿ ಏನೋ ತಳಮಳವಿದೆ. ಈ ಎರಡೂ ಘಟನೆಗಳಿಂದ ಬಿಜೆಪಿಯ ವಿರುದ್ಧ ಜನರು ವ್ಯಕ್ತಪಡಿಸಿದ ಆಕ್ರೋಶವನ್ನು ಮಾಯಾವತಿ ಗಮನಿಸದೇ ಇದ್ದಿಲ್ಲ.

2014ರಲ್ಲಿ ನಡೆದಿದ್ದು ಐತಿಹಾಸಿಕ ಆದರೆ ಅದೇ ಮಾದರಿ ಇನ್ನೊಂದು ಚನಾವಣೆಯಲ್ಲಿ ಮುಂದುವರಿದಿರುವ ದೃಷ್ಟಾಂತ ಕಡಿಮೆ. ವಾಸ್ತವದಲ್ಲಿ ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತಗಳ ಪಾಲು  ಮೂರನೇ ಸ್ಥಾನಕ್ಕೆ ಇಳಿದಿದೆ. ತ್ರಿಕೋನ ಸ್ಪರ್ಧೆಯಲ್ಲಿ ಶೇ 30ರಷ್ಟು ಮತ  ಬಹುಮತ ಪಡೆಯಲು ಇಲ್ಲಿ ಸಾಕು-ಕಾರಣ ಇಲ್ಲಿ ಬಿಹಾರದಂತೆ ಯಾವುದೇ ಮಹಾಮೈತ್ರಿಯಿಲ್ಲ.

ಇಲ್ಲಿ ಮೋದಿ ಹಲವಾರು ರ್ಯಾಲಿಗಳಲ್ಲಿ ಕಾಣಿಸಿಕೊಂಡರೂ ಸ್ಥಳೀಯ ನಾಯಕರು ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯ  ಕೊರತೆ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಬಹುದು. ಅದು ಸಾಲದಿದೆಂಬಂತೆ ನವೆಂಬರ್ 8ಕ್ಕಿಂತ ಮೊದಲು ರಾಜಕೀಯ ಪಂಡಿತರು ಹೂಡಿದ್ದ ಲೆಕ್ಕಾಚಾರಗಳೆಲ್ಲವೂ ನೋಟು ಅಮಾನ್ಯೀಕರಣದ ನಂತರ ಕೊಚ್ಚಿ ಹೋಗಿರಬಹುದು. ನೋಟು ಅಮಾನ್ಯೀಕರಣ ಸೃಷ್ಟಿಸಿದ ಸಮಸ್ಯೆಗಳು ಬಿಜೆಪಿಯ ರಾಜಕೀಯ ಭವಿಷ್ಯವನ್ನೇ ಹಾಳುಗೆಡಹುವ ಸಾಧ್ಯತೆಯಿದೆ.

ಅತ್ತ ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಕುಟುಂಬ ಜಗಳದಿಂದಾಗಿ ಮಾಯಾವತಿಯ ಬಿಎಸ್ಪಿ ತನ್ನ ದಲಿತ-ಮುಸ್ಲಿಂ ಮತಗಳು ಭದ್ರವಾಗಿವೆಯೆಂಬ ಭಾವನೆಯಲ್ಲಿದೆ. ಇದೇ ಕಾರಣದಿಂದ ಮಾಯಾವತಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆ. ಆಕೆಯ ಪಕ್ಷ ಸುಮಾರು 100  ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗನ್ನು ನಿಲ್ಲಿಸಲಿದೆ. “ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಈ ಬಾರಿಯೂ ಹಾಗೆಯೇ ಆಗಬೇಕೇ ?” ಎಂದು ಆಕೆಯ ಸಮೀಪವರ್ತಿ ನಸೀಮುದ್ದೀನ್ ಸಿದ್ದೀಖಿ ಮತ್ತವರ ಪುತ್ರ ಅಫ್ಝಲ್ ಮತದಾರರನ್ನು ಪ್ರಶ್ನಿಸುತ್ತಿದ್ದಾರೆ.

ತರುವಾಯ ಆಡಳಿತ ಪಕ್ಷದಲ್ಲಿನ ತಂದೆ-ಮಗನ ಜಗಳ ಇನ್ನೂ ಅಂತ್ಯ ಕಂಡಿಲ್ಲ. ಅಖಿಲೇಶ್ ಹಾಗೂ ಅವರ ಪಕ್ಷಕ್ಕೆ ಈ ಬಿಕ್ಕಟ್ಟಿನಿಂದ ಹೊರ ಬರಲು ಹೌದಿನಿ  ಮಾದರಿಯ ಮಾಯೆಯ ಅಗತ್ಯವಿದೆ.

ಆದರೆ ಮುಲಾಯಂ ಅವರು ಅದೆಷ್ಟು ತೀಕ್ಷ್ಣಮತಿ ರಾಜಕಾರಣಿಯೆಂದರೆ ಕೊನೆಗಳಿಗೆಯಲ್ಲಿ ಅವರು ಹೊಂದಾಣಿಕೆ ಸಾಧಿಸಬಹುದು. ತಳಮಟ್ಟದಲ್ಲಿ ಅವರ ಪಕ್ಷ ಬಲಿಷ್ಠವಾಗಿದೆಯಲ್ಲದೆ ಅಪಾರ  ಜನಬೆಂಬಲ ಹೊಂದಿದ್ದು ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಶಕ್ತಿ ಅದಕ್ಕಿದೆ.

 

ಉತ್ತರ ಪ್ರದೇಶದಲ್ಲಿ ಗೆಲುವಿಗಾಗಿ ದಲಿತ-ಮುಸ್ಲಿಂ ಅಭ್ಯರ್ಥಿಗಳನ್ನೇ ನೆಚ್ಚಿಕೊಂಡಿರುವ ಮಾಯಾವತಿ

ಲಖನೌ : ಉತ್ತರ ಪ್ರದೇಶದ ಶೇ 40ರಷ್ಟು ಜನಸಂಖ್ಯೆ ದಲಿತ ಹಾಗೂ ಮುಸ್ಲಿಂ ಸಮುದಾಯಗಳಿಗೆ ಸೇರಿರುವ ಕಾರಣ ಈ ಸಮುದಾಯಗಳ ಜನಸಂಖ್ಯೆ ಅತೀ ಹೆಚ್ಚಾಗಿರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಾಯಾವತಿಯ ಬಹುಜನ ಸಮಾಜ ಪಕ್ಷ ಗೆಲುವು ಸಾಧಿಸಲು ದಲಿತ ಹಾಗೂ ಮುಸ್ಲಿಂ ಅಭ್ಯರ್ಥಿಗಳನ್ನೇ ನಂಬಿದೆಯೆಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಅಲ್ಲಿನ 20 ಜಿಲ್ಲೆಗಳ ಅಭ್ಯರ್ಥಿಯ ಪಟ್ಟಿ ದಾಖಲೆ ಒದಗಿಸಿದೆ. 2013ರ ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಹಿಂಸಾಚಾರ ಕಂಡಿದ್ದ ಇಲ್ಲಿ ಪಕ್ಷ ಕಣಕ್ಕಿಳಿಸಿರುವ ಒಟ್ಟು 100 ಅಭ್ಯರ್ಥಿಗಳಲ್ಲಿ 54 ಮಂದಿ ಈ ಎರಡು ಸಮುದಾಯಗಳಿಗೆ ಸೇರಿದವರು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಾಯಾವತಿ 18  ದಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಇವರಲ್ಲಿ 17 ಮಂದಿ ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದ 36 ಮಂದಿ ಮುಸ್ಲಿಂ ಅಭ್ಯರ್ಥಗಳಾಗಿದ್ದಾರೆ.

ತನ್ನ ಪಕ್ಷ ಕಣಕ್ಕಿಳಿಸಲಿರುವ ಒಟ್ಟು 403 ಅಭ್ಯರ್ಥಿಗಳಲ್ಲಿ, 97 ಮುಸ್ಲಿಮರು (2012 ಚುನಾವಣೆಗೆ ಹೋಲಿಸಿದರೆ ಒಂದು ಡಜನ್ ಹೆಚ್ಚು), 113 ಮೇಲ್ವರ್ಗದವರು (66 ಬ್ರಾಹ್ಮಣರು, 36 ಕ್ಷತ್ರಿಯರು ಮತ್ತು ವೈಶ್ಯ, ಕಾವಸ್ಥ ಹಾಗೂ ಖತ್ರಿ ಸಮುದಾಯಕ್ಕೆ ಸೇರಿದ 11 ಮಂದಿ) ಎಂದು ಮಾಯಾವತಿ ಈಗಾಗಲೇ ಹೇಳಿದ್ದಾರೆ. ಪಕ್ಷ ಕಳೆದ ಬಾರಿ 113 ಮಂದಿ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದರೆ ಈ ಬಾರಿ 106 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಅಂತೆಯೇ ದಲಿತ ಅಭ್ಯರ್ಥಿಗಳ ಸಂಖ್ಯೆ 88ರಿಂದ 87ಕ್ಕೆ ಇಳಿದಿದೆ.