ಉ ಪ್ರ ಪೌರ ಚುನಾವಣೆ : ಉಚಿತ ವೈಫೈ, ಪಿಂಕ್ ಶೌಚಾಲಯ ಭರವಸೆಯಿತ್ತ ಬಿಜೆಪಿ

ಲಕ್ನೊ : ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಉಚಿತ ವೈಫೈ, ಮಹಿಳೆಯರಿಗೆ ಪಿಂಕ್ ಟಾಯ್ಲೆಟುಗಳು, ಎಲ್ಲಾ ಮನೆಗಳಿಗೆ ಉಚಿತ ನೀರಿನ ಸೌಲಭ್ಯಗಳು ಇವು ಉತ್ತರಪ್ರದೇಶದ ಪೌರ ಚುನಾವಣೆಗೆ ಭಾನುವಾರ ಬಿಜೆಪಿ ಬಿಡುಗಡೆ ಮಾಡಿದ “ಸಂಕಲ್ಪ ಪತ್ರ”ದಲ್ಲಿರುವ ಪ್ರಮುಖ ಅಂಶಗಳು.

ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥರಿಗೆ ಇದು ಮೊದಲ ಚುನಾವಣಾ ಅಗ್ನಿಪರೀಕ್ಷೆಯಾಗಲಿದ್ದು, ಬಿಜೆಪಿಯ ಮುಖ್ಯ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮ, ನಗರಾಭಿವೃದ್ಧಿ ಸುರೇಶ್ ಖನ್ನಾ ಮತ್ತು ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಅವರೊಂದಿಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಆದಿತ್ಯಾನಾಥರು ನಿಷ್ಪಕ್ಷಪಾತ ಮತ್ತು ಪಾರದರ್ಶಕ ಆಡಳಿತವನ್ನು ನೀಡುವ ಭರವಸೆ ನೀಡಿದರು. 16 ಪುರಸಭಾ ನಿಗಮಗಳನ್ನೊಳಗೊಂಡು, 652ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ತಮ್ಮ ಸರ್ಕಾರದ ಅವಧಿಯಲ್ಲಿ ರಚಿತವಾದ ಪುರಸಭಾ ನಿಗಮಗಳಾದ ಅಯೋಧ್ಯಾ, ಮಥುರಾ ಮತ್ತು ವೃಂದಾವನಗಳಲ್ಲಿ ಮೊದಲ ಬಾರಿ ಚುನಾವಣೆ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಉತ್ತಮ ಕುಡಿಯುವ ನೀರಿನ ಸವಲತ್ತುಗಳು, ಸುಧಾರಿತ ಬೀದಿ ದೀಪಗಳು, ಉಚಿತ ಸಾರ್ವಜನಿಕ ಶೌಚಾಲಯಗಳು, ಮಹಿಳೆಯರಿಗೆ ಪಿಂಕ್ ಶೌಚಾಲಯಗಳು, ಖಾಸಗಿ ಶೌಚಾಲಯಗಳನ್ನು ಕಟ್ಟಲು 20000 ರೂಪಾಯಿಗಳ ಅನುದಾನ, ಆದರ್ಶ ನಗರ ಪಂಚಾಯತುಗಳಿಗೆ ಅವಕಾಶ, ಇ-ಟೆಂಡರಿಂಗ್ ಮತ್ತು ಪ್ರಾಣಿಗಳಿಗೋಸ್ಕರ “ಕಂಜಿ” ಮನೆಗಳ ಸ್ಥಾಪನೆ ಇಂತಹ 28 ಭರವಸೆಗಳನ್ನು ಈ ಸಂಕಲ್ಪ ಪತ್ರ ಒಳಗೊಂಡಿದೆ. ಸಣ್ಣ ವ್ಯಾಪಾರಿಗಳ ಹಿತರಕ್ಷಣೆ, ಎಲ್ಲಾ ಮನೆಗಳಿಗೆ ಉಚಿತ ಕುಡಿಯುವ ನೀರಿನ ಭರವಸೆ, ಸಾರ್ವಜನಿಕ ಕುಂದು ಕೊರತೆಗಳಿಗೆ ತಕ್ಷಣವೇ ಸ್ಪಂದಿಸುವುದು, ಸರಿಯಾದ ಬಸ್ ಸೇವೆಗಳು, ಸ್ವಚ್ಛ ಪರಿಸರ, ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಉದ್ಯಾನಗಳ ನವೀಕರಣ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ಮನೆ ತೆರಿಗೆಯಿಂದ ವಿನಾಯಿತಿಗಳಂತಹ ಭರವಸೆಗಳನ್ನು ನೀಡಲಾಗಿದೆ.

ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಪರಿವರ್ತಿಸುವುದು, ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಅಡಿಟೋರಿಯಂ ಮತ್ತು ಎಕ್ಸಿಬಿಶನ್ ಮೈದಾನಗಳು ಮತ್ತು ಉತ್ತಮ ಕೆಲಸಗಾರರಿಗೆ ಪುರಸ್ಕಾರದಂತಹ ಭರವಸೆಗಳಿವೆ. ರಾಜ್ಯದಲ್ಲಿ ಭಾಗಶಃ ವಿದ್ಯುತ್ ಪೂರೈಕೆ ಕೊನೆಗೊಳ್ಳಲಿದೆ ಎಂದು ಆದಿತ್ಯಾನಾಥರು ಹೇಳಿದ್ದಾರೆ.