ದಲಿತರು ಇಲ್ಲಿನ ಬಾವಿ ನೀರು ಮುಟ್ಟಿದರೆ ಹನುಮಂತನ ಕೋಪಕ್ಕೆ ತುತ್ತಾಗುತ್ತಾರಂತೆ

ಅಸ್ಪ್ರಶ್ಯತೆಯ ಪಿಡಲು ಈ ಗ್ರಾಮದಲ್ಲಿ ಇನ್ನೂ ಜೀವಂತ 

ನಮ್ಮ ದೇಶದಲ್ಲಿ ಸಂವಿಧಾನದ ಆಶಯದಂತೆ ಅಸ್ಪøಶ್ಯತೆಗೆ ಅವಕಾಶವಿಲ್ಲದೇ ಇದ್ದರೂ ಈ ಸಾಮಾಜಿಕ ಪಿಡುಗು ಇಂದಿಗೂ ಹಲವಾರು ಕಡೆಗಳಲ್ಲಿ ಜೀವಂತವಾಗಿರುವುದು ಕಟು ಸತ್ಯ. ರಾಜ್ಯದ ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ಚಂದಾಪುರ ಗ್ರಾಮದಲ್ಲಿ ಅಸ್ಪøಶ್ಯತೆಯ ಪಿಡುಗು ಅದೆಷ್ಟು ಬೇರು ಬಿಟ್ಟಿದೆಯೆಂದರೆ ಈ ಗ್ರಾಮದ ದಲಿತರು ಇಲ್ಲಿನ ಏಕೈಕ ಬಾವಿಯಿಂದ ನೀರು ಸೇದುವುದು ಬಿಡಿ, ಬಾವಿಯ ಪಕ್ಕಕ್ಕೂ ಬರಲು ಸಾಧ್ಯವಿಲ್ಲ.

ಅಸ್ಪøಶ್ಯತೆ ಪದ್ಧತಿಯನ್ನು ಪಾಲಿಸುತ್ತಿರುವುದಕ್ಕೆ ಇಲ್ಲಿನ ಮೇಲ್ಜಾತಿಯ ಹಿಂದೂಗಳು ಒಂದು ವಿಚಿತ್ರ ಕಾರಣವನ್ನೂ ನೀಡುತ್ತಾರೆ. ದಲಿತರು ಈ ಬಾವಿಯ ನೀರನ್ನು ಮುಟ್ಟಿದರೆ ಅದು ಹನುಮಂತ ದೇವರ ಕೋಪಕ್ಕೆ ಕಾರಣವಾಗುವುದಂತೆ. ಬರ ಪೀಡಿತ ಈ ಗ್ರಾಮದಲ್ಲಿ ಈ ನೆಪವೊಡ್ಡಿ ಮೇಲ್ಜಾತಿಯ ಹಿಂದೂಗಳು ದಲಿತರನ್ನು ಚೆನ್ನಾಗಿಯೇ ತುಳಿಯುತ್ತಿದ್ದಾರೆ. “ಮೇಲ್ಜಾತಿಯ ಜನರು ನಮಗೆ ನೀರು ನೀಡಬೇಕಾದರೆ ನಾವು ಅವರನ್ನು ಕಾಯುತ್ತಾ ಕೂರಬೇಕು.  ಅವರು ಬಾವಿಯಿಂದ ನೀರು ಸೇದಿದ ನಂತರ ನಮಗೆ ದಿನಕ್ಕೆ ಒಂದೆರಡು ಬಿಂದಿಗೆ ನೀರು ನೀಡುತ್ತಾರೆ” ಎಂದು ಗ್ರಾಮದ  ಕೃಷಿ ಕಾರ್ಮಿಕರೊಬ್ಬರು ವಿವರಿಸುತ್ತಾರೆ.

ಈ ಗ್ರಾಮದಲ್ಲಿ ನಳ್ಳಿ ನೀರಿನ ಸೌಲಭ್ಯವಿದ್ದರೂ  ಇಲ್ಲಿನ ನಳ್ಳಿಗಳಲ್ಲಿ ವಾರದಲ್ಲಿ ಕನಿಷ್ಠ ಆರು ದಿನ ನೀರು ಸುಳಿಯುವುದೇ ಇಲ್ಲ. ಇವಿಷ್ಟೂ ಸಮಸ್ಯೆ ಸಾಲದೆಂಬಂತೆ  ದಲಿತರು ತಮ್ಮ ಗೋವುಗಳನ್ನು  ಗ್ರಾಮದ ಕೆರೆಯ ಬಳಿ ನೀರು ಕುಡಿಯಲೂ ಬಿಡಲು ಆಸ್ಪದವಿಲ್ಲ. ದಲಿತರು ಗ್ರಾಮದ ಕೆರೆಯ ಬಳಿ ಬಟ್ಟೆ ಒಗೆಯುವುದೂ ಇಲ್ಲಿ ನಿಷಿದ್ಧ. ದಲಿತರ ಗೋವುಗಳಿಗೆ ಮೇಲ್ಜಾತಿಯ ಜನರೇ ಬಕೆಟ್ಟುಗಳಲ್ಲಿ ನೀರು ತುಂಬಿಸಿ ಕೊಡುತ್ತಾರೆ.ಈ ಪದ್ಧತಿ ಕಳೆದ ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದು, ಎಲ್ಲಿ ಹನುಮಂತನ ಕೋಪಕ್ಕೆ  ತುತ್ತಾಗುತ್ತೇವೆಯೋ ಎಂದು ಹೆದರಿ ದಲಿತರೂ ಮೇಲ್ಜಾತಿಯ  ಹಿಂದೂಗಳು ಹೇಳಿದಂತೆಯೇ ನಡೆದುಕೊಳ್ಳುತಿದ್ದಾರೆ.

ಚಂದಾಪುರ ಗ್ರಾಮವಿರುವ ಕಡೆಚ್ಚೂರು ಪಂಚಾಯತ್  ಸರಪಂಚ ಎಸ್ ಪ್ರವೀಣ್ ಮಾತ್ರ  ತಮಗೆ ಈ ಗ್ರಾಮದಲ್ಲಿನ ಅಸ್ಪøಶ್ಯತೆಯ ಪಿಡುಗಿನ ಬಗ್ಗೆ ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ.  ಇಂತಹ ಪದ್ಧತಿಯ ವಿರುದ್ಧ ಜಿಲ್ಲಾಡಳಿತಕ್ಕೆ ಪತ್ರ ಬರೆದು ದಲಿತರಿಗೂ ನೀರಿನ ಸೌಲಭ್ಯ ಒದಗಿಸುವ ಕುರಿತು ಸೂಕ್ತ ಕ್ರಮಕ್ಕೆ ಆಗ್ರಹಿಸುವುದಾಗಿ ಹೇಳಿದ್ದಾರೆ.