ಚರ್ಚುಗಳಲ್ಲಿ ಅಸ್ಪøಶ್ಯತೆ

ತೈಲಪುರಂ (ತ ನಾ) : ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಕ್ಯಾಥೊಲಿಕ್ ಚರ್ಚ್‍ಗಳಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪøಶ್ಯತೆಯ ಆಚರಣೆ ಜೀವಂತವಾಗಿದೆ ಎಂದು ಭಾರತೀಯ ಕ್ಯಾಥೊಲಿಕ್ ಚರ್ಚ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ತೈಲಪುರಂನಲ್ಲಿರುವ ಕ್ಯಾಥೊಲಿಕ್ ಚರ್ಚ್‍ನ ಪಾದ್ರಿ ಸ್ಥಾನದಿಂದ ರಾಜೀನಾಮೆ ನೀಡಿರುವ ಇರುದಯರಾಜ್ ತುಸ್ನೇವಿಶ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸಾಂಪ್ರದಾಯಿಕ ಕ್ಯಾಥೊಲಿಕ್ ಚರ್ಚುಗಳಲ್ಲಿ ದಲಿತ ಸಮುದಾಯಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಆರೋಪಿಸುವ ಇರುದಯರಾಜ್ ತಾವು ದಲಿತ ಸಮುದಾಯಕ್ಕೆ ಸೇರಿದ್ದ ಹಿನ್ನೆಲೆಯಲ್ಲಿ ಪಾದ್ರಿಯಾಗಲು ಪಟ್ಟ ಕಷ್ಟಗಳನ್ನು ಕುರಿತು ವಿವರಿಸುತ್ತಾರೆ.

ಕ್ಯಾಥೊಲಿಕ್ Zರ್ಚುಗಳಲ್ಲಿ ತಾವು ಎದುರಿಸಿದ ಜಾತಿ ತಾರತಮ್ಯದಿಂದ ಬೇಸತ್ತು ಇರುದಯರಾಜ್ ತಮ್ಮದೇ ಆದ ದಲಿತ ಕ್ಯಾಥೊಲಿಕ್ ಚರ್ಚ್ ಆರಂಭಿಸಿದ್ದಾರೆ. ತಾವು ಕ್ರೈಸ್ತ ಸೆಮಿನರಿಯಲ್ಲಿ ವ್ಯಾಸಂಗ ಮಾಡಲು ಅಪೇಕ್ಷಿಸಿದಾಗ ಜಾತಿಯ ಕಾರಣದಿಂದಲೇ ತಮಗೆ ಪ್ರವೇಶ ನಿರಾಕರಿಸಿದ ಕ್ಯಾಥೊಲಿಕ್ ನಾಯಕರ ವರ್ತನೆಗೆ ಬೇಸತ್ತು ಇರುದಯರಾಜ್ ಕೊಲ್ಕತ್ತಾದ ಸೆಮಿನರಿಯಲ್ಲಿ ವ್ಯಾಸಂಗ ಮುಗಿಸಿ ಬೆಂಗಳೂರಿನ ಪಾದ್ರಿಯೊಬ್ಬರಿಂದ ದೀಕ್ಷೆ ಪಡೆದಿದ್ದಾರೆ.

ಎಂಟು ವರ್ಷಗಳ ಕಾಲ ಕ್ಯಾಥೊಲಿಕ್ ಚರ್ಚಿನಲ್ಲಿ ಪಾದ್ರಿಯಾಗಿದ್ದ ಇರುದಯರಾಜ್, ಪ್ರಾರ್ಥನೆ ಸಲ್ಲಿಸುವುದನ್ನು ಬಿಟ್ಟರೆ ತಮಗೆ ಯಾವುದೇ ಅವಕಾಶ ನೀಡುತ್ತಿರಲಿಲ್ಲ ಎಂದು ವ್ಯಥೆಪಡುತ್ತಾರೆ. ಚರ್ಚುಗಳಲ್ಲಿರುವಾಗ ದಲಿತ ಕ್ರೈಸ್ತರೊಡನೆ ಮಾತನಾಡಿದರೆ ಆಕ್ಷೇಪಿಸುವುದು ಸಾಮಾನ್ಯವಾಗಿದ್ದು ಇತರ ಕ್ರೈಸ್ತರಾರೂ ತಮ್ಮ ಬಳಿ ಮಾತನಾಡುತ್ತಿರಲಿಲ್ಲ ಎಂದು ಹೇಳುವ ಇರುದಯರಾಜ್ ದಲಿತ ಕ್ರೈಸ್ತರಿಗೆ ಪ್ರತ್ಯೇಕ ಸ್ಮಶಾನ ಇರುವುದೇ ತಾರತಮ್ಯದ ಸಂಕೇತ ಎನ್ನುತ್ತಾರೆ.

ಕ್ಯಾಥೊಲಿಕ್ ಚರ್ಚುಗಳಲ್ಲಿ ಪಾದ್ರಿ ಅಥವಾ ಬಿಷಪ್ ಆಗುವುದು ಒಂದು ಸೇವಾವೃತ್ತಿಯಾಗದೆ ಹುದ್ದೆಯಾಗಿ ಪರಿಣಮಿಸಿದೆ ಎಂದು ಹೇಳುವ ಅವರು, ಎಲ್ಲ ಚರ್ಚುಗಳಲ್ಲೂ ಪ್ರಬಲ ಗುಂಪುಗಳು ತಮ್ಮ ಅಧಿಪತ್ಯ ಸಾಧಿಸಿವೆ ಎಂದು ಆರೋಪಿಸುತ್ತಾರೆ. ರಾಷ್ಟ್ರಮಟ್ಟದಲ್ಲಿ ಕ್ಯಾಥೊಲಿಕ್ ಚರ್ಚ್ ಹಿರಿಯರು ದಲಿತರ ವಿರುದ್ಧ ಇರುವ ತಾರತಮ್ಯ ಮತ್ತು ಅಸ್ಪøಶ್ಯತೆಯನ್ನು ಒಪ್ಪಿಕೊಂಡಿದ್ದರೂ ಈ ವ್ಯವಸ್ಥೆಯನ್ನು ಅವರಿಂದ ಬದಲಾಯಿಸಲಾಗುವುದಿಲ್ಲ ಎನ್ನುತ್ತಾರೆ.

ದಲಿತ ಯುವಕರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗುತ್ತಿರುವುದರಿಂದ ಚರ್ಚ್ ನಾಯಕರಿಗೆ ಈಗ ಜ್ಞಾನೋದಯವಾಗಿದ್ದು ತಪ್ಪಿನ ಅರಿವಾಗಿದೆ ಎಂದು ಅವರು ಹೇಳುತ್ತಾರೆ. “ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದರ ಮೂಲಕ ಈ ಜಾತಿ ಪ್ರಜ್ಞೆಯನ್ನು ಹೋಗಲಾಡಿಸಲು ಸಾಧ್ಯ.  ಹಾಗಾದಲ್ಲಿ ಮಾತ್ರ ದಲಿತ ಕ್ರೈಸ್ತರಿಗೆ ಚರ್ಚುಗಳಲ್ಲಿ ಒಂದು ಘನತೆಯ ಸ್ಥಾನ ಒದಗಲು ಸಾಧ್ಯ” ಎಂದು ಇರುದಯರಾಜ್ ಹೇಳುತ್ತಾರೆ.