ರಾಜ್ಯದಲ್ಲಿ ಕೃಷಿ ಕ್ಷೇತ್ರದ ಹೇಳತೀರದ ಬವಣೆ

ಕರ್ನಾಟಕದ ರೈತರ ಪಾಲಿಗೆ 2016 ಕರಾಳ ವರ್ಷವಾಗಿ ಪರಿಣಮಿಸಿದೆ. ಈಗಾಗಲೇ ಆದಾಯದ ಕುಸಿತದಿಂದ ಜರ್ಝರಿತರಾಗಿರುವ ರೈತಾಪಿ ಸಮುದಾಯಕ್ಕೆ ಈ ಬವಣೆ ಕಾಡಬಾರದಿತ್ತು.  ಎರಡು ವರ್ಷಗಳ ಸತತ ಬರಗಾಲದ ನಂತರ ಈ ವರ್ಷ ಕೆಲವು ತಿಂಗಳುಗಳ ಕಾಲ ಬಿಸಿಲಿನ ಝಳವೂ ಹೆಚ್ಚಾಗಿತ್ತು. ಹಾಗಾಗಿ ಉತ್ಪಾದನೆಯಲ್ಲಿ ಕುಸಿತವಾಗಿರುವುದೇ ಅಲ್ಲದೆ ಫಸಲಿಗೆ ಸೂಕ್ತ ಬೆಲೆಯೂ ದೊರೆಯದೆ ರೈತರು ಕಂಗಾಲಾಗಿದ್ದಾರೆ.

ಮುಂಬರುವ ವರ್ಷದಲ್ಲಿ ತಮ್ಮ ಬದುಕು  ಹಸನಾಗುತ್ತದೆ ಎಂಬ ಭರವಸೆಯ ಮೇಲೆ ರೈತರು ಮುನ್ನಡೆದಿದ್ದಾರೆ. ಎರಡು ವರ್ಷ ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರ ಜೀವನವೇ ದುಸ್ತರವಾಗಿದ್ದು, ಬರಗಾಲ, ಅಂತರರಾಜ್ಯ ಜಲ ವಿವಾದ ಮತ್ತು ನೋಟು ಅಮಾನ್ಯೀಕರಣದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ವರ್ಷ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆಯೂ ಹೆಚ್ಚಾಗಿದೆ.  ಬೆಳೆ ನಾಶ ಮತ್ತು ಸಾಲದ ಹೊರೆಯೇ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ. ಮಹಾದಾಯಿ ಮತ್ತು ಕಾವೇರಿ ವಿವಾದಗಳ ಹಿನ್ನೆಲೆಯಲ್ಲಿ ರಾಜ್ಯದ ರೈತಾಪಿ ಸಮುದಾಯ ಹಿಂಸಾತ್ಮಕ ಪ್ರತಿಭಟನೆಗಳಿಗೂ ಮುಂದಾಗಿದ್ದು ಈ ವರ್ಷದ ವಿಶೇಷ.

2015ರಲ್ಲಿ ಮುಂಗಾರು ಮಳೆ ವಿಫಲವಾದ ನಂತರ ಮುಂಗಾರು ಪೂರ್ವ ಮಳೆಯೂ ಸಾಕಷ್ಟು ನೆರವು ನೀಡದೆ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು.  ವಾಯುವ್ಯ ಮುಂಗಾರು ಮಳೆಯಲ್ಲೂ ಕೊರತೆ ಉಂಟಾಗಿದ್ದರಿಂದ  ರಾಜ್ಯಾದ್ಯಂತ ಕೃಷಿ ಉತ್ಪಾದನೆ ಕುಸಿದಿದ್ದೇ ಅಲ್ಲದೆ ಕುಡಿಯುವ ನೀರಿಗೂ ಬರ ಎದುರಿಸಬೇಕಾಯಿತು.  ಈಶಾನ್ಯ ಮುಂಗಾರು ಸಹ ದುರ್ಬಲವಾಗಿದ್ದು ಈವರೆಗೂ ಶೇ 50ರಷ್ಟು ಮಾತ್ರ ಮಳೆ ಬಂದಿದೆ. 2016ರಲ್ಲಿ 132 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯ ಗುರಿ ಹೊಂದಿದ್ದ ಕರ್ನಾಟಕ ಸರ್ಕಾರ, ಮುಂಗಾರು ವೈಫಲ್ಯದ ಪರಿಣಾಮ ಕೃಷಿ ಉತ್ಪಾದನೆ ಶೇ 40ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.

ಮುಂಗಾರು ವೈಫಲ್ಯ ಮತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಸರ್ಕಾರ ಮತ್ತೊಂದು ಬರಗಾಲದ ಎಚ್ಚರಿಕೆ ನೀಡಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ ಹೆಚ್ಚಾಗದೆ ಹೋದರೆ 2017ರ ಮೊದಲ ಐದು ತಿಂಗಳುಗಳಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಬಹುದು. ಕಳೆದ ವರ್ಷ ಕಾವೇರಿ ಮತ್ತು ಮಹಾದಾಯಿ ನದಿ ವಿವಾದಗಳೂ ಉಲ್ಬಣಿಸಿದ್ದು ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು ಸಂಘರ್ಷದ ಹಾದಿ ತುಳಿದಿದ್ದವು. ಕಾವೇರಿ ಗಲಭೆಯಿಂದ ಸಾಮಾನ್ಯವಾಗಿ ಭಾಧಿತವಾಗದ ಬೆಂಗಳೂರು ನಗರವೂ ಸಹ ಕಳೆದ ವರ್ಷ ಪ್ರಕ್ಷುಬ್ಧ ವಾತಾವರಣ ಎದುರಿಸಿತ್ತು.