ಚಿತ್ರಾಪು ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ತೊಂದರೆ

ಚಿತ್ರಾಪು ಪ್ರಧಾನ ರಸ್ತೆಯಲ್ಲಿ ಮಣ್ಣು ಹಾಕಿರುವುದು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಳೆದ ಒಂದು ವಾರದಿಂದ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಕಾರ್ನಾಡು ಬೈಪಾಸ್ ಬಳಿಯಿಂದ ಚಿತ್ರಾಪು ಪ್ರಮುಖ ರಸ್ತೆಯ ಒಳಚರಂಡಿ ಕಾಮಗಾರಿ ನಿಧಾನವಾಗಿ ಶುರುವಾಗಿದ್ದು, ಧೂಳಿನ ಸಮಸ್ಯೆ ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

“ಮುಲ್ಕಿ ನಗರ ಪಂಚಾಯತಿಯಿಂದ ನಗರೋತ್ತಾನ ಯೋಜನೆಯಡಿ ಒಳಚರಂಡಿ ಕಾಮಗಾರಿ ಶುರುವಾಗಿದ್ದು, ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ನಡೆಸುವವರು ರಸ್ತೆ ಅಗೆದು ಮಣ್ಣನ್ನು ಪ್ರಧಾನ ರಸ್ತೆಯಲ್ಲಿ ಹಾಕಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಹಾಗೂ ಪರಿಸರವಿಡೀ ಧೂಳುಮಯ ವಾತಾವರಣ ಸೃಷ್ಟಿಯಾಗಿದೆ. ಸ್ಥಳದಲ್ಲಿ ನರ್ಸರಿ ಶಾಲೆ ಕೂಡ ಇದ್ದು, ಧೂಳಿನಿಂದ ಜನ ಕಂಗೆಟ್ಟಿದ್ದಾರೆ” ಎಂದು ಸ್ಥಳೀಯ ಪಂಚಾಯತಿ ಸದಸ್ಯ ಸಂದೀಪ ಚಿತ್ರಾಪು ಆರೋಪಿಸಿದ್ದಾರೆ.

“ಕಾಮಗಾರಿ ಕೂಡ ಕಳಪೆಯಾಗಿದ್ದು, ಈ ಬಗ್ಗೆ ನಗರ ಪಂಚಾಯತಿ ಸಂಪರ್ಕಿಸಿದರೆ ಗುತ್ತಿಗೆದಾರರರನ್ನು ಸಂಪರ್ಕಿಸಿ ಎಂದು ಉತ್ತರ ಬರುತ್ತದೆ. ಹಾಸನ ಮೂಲದ ರಂಗರಾಜ್ ಎಂಬಾತ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು ಉಪಗುತ್ತಿಗೆಯನ್ನು ಸ್ಥಳೀಯರೊಬ್ಬರಿಗೆ ವಹಿಸಿಕೊಟ್ಟಿದ್ದು, ಗುತ್ತಿಗೆದಾರರರು ಯಾರು ಎಂದು ಗೊತ್ತಾಗುತ್ತಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಮುಲ್ಕಿ ನಗರ ಪಂಚಾಯತಿ ವ್ಯಾಪ್ತಿಯ ನಗರೋತ್ತಾನ ಯೋಜನೆಯಡಿ ನಾಲ್ಕು ಕಡೆ ಕಾಮಗಾರಿ ನಡೆಯಲಿದೆ. ಅದರಲ್ಲಿ ಚಿತ್ರಾಪು ಪ್ರಧಾನ ರಸ್ತೆಯ ನಗರೋತ್ತಾನ ಕಾಮಗಾರಿಯಲ್ಲಿ ಕಳಪೆಯಾಗಿದ್ದು, ಸರಕಾರದ ಹಣ ಪೋಲಾಗುತ್ತಿದೆ. ಕೂಡಲೇ ಈ ಬಗ್ಗೆ ಸ್ಥಳೀಯ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು” ಎಂದು ಸಂದೀಪ್ ಹೇಳಿದ್ದಾರೆ.