ದ್ವಿಚಕ್ರ ವಾಹನಿಗರಿಗೆ ತಲೆ ನೋವು ತಂದ ಶಿಬರೂರು ರಸ್ತೆ ಮಧ್ಯೆ ಅವೈಜ್ಞಾನಿಕ ಹಂಪ್ಸ್

ಕಿನ್ನಿಗೋಳಿಯಿಂದ ಶಿಬರೂರು ಮೂಲಕ ಸುರತ್ಕಲ್ ಕಡೆ ಬರುವ ರಸ್ತೆಯ ಮಧ್ಯೆ ಅಲ್ಲಲ್ಲಿ ಕಂಡು ಬರುವ ಹಂಪುಗಳಿಂದ ಬೈಕ್ ಮತ್ತು ಇತರ ಸಣ್ಣಪುಟ್ಟ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಶಿಬರೂರು ಕಿನ್ನಿಗೋಳಿ ಮಧ್ಯೆ ಹತ್ತಾರು ಹಂಪ್ಸ್ ಇದು ರಸ್ತೆ ಮೇಲಿನ ಉಬ್ಬಿನಂತಿರದೆ ಗದ್ದೆ ಗದ್ದೆಗಳನ್ನು ಬೇರ್ಪಡಿಸುವ ಹುಣಿಯಂತೆ ಇದೆ. ಅಪ್ಪಿತಪ್ಪಿ ಬೈಕ್ ಸವಾರ ಅರಿವಿಲ್ಲದೆ ಇದರ ಮೇಲೇರಿದರೆ ಹೃದಯಾಘಾತವಾದಂತಾಗುತ್ತದೆ. ಈ ರಸ್ತೆಯಲ್ಲಿ ದಿನಾ ಎರಡೆರಡು ಬಾರಿ ಸಂಚಾರ ಮಾಡಿದ ದ್ವಿಚಕ್ರ ವಾಹನ ಸವಾರರಿಗೆ ಬೆನ್ನು ನೋವು ಹತ್ತುವುದು ಗ್ಯಾರಂಟಿಯಾಗಿದೆ.
ಈ ಹಂಪುಗಳನ್ನು ನಿಯಮಬದ್ಧವಾಗಿ ಮಾಡಿಲ್ಲ  ಯಾವುದೋ ಕಾರಣಕ್ಕೋ ಬೇಕೆಂದೇ ಎತ್ತರವಾಗಿ ನಿರ್ಮಿಸಲಾಗಿದೆ  ಒಂದೆರಡು ಕಡೆಯಂತೂ ಹಂಪ್ಸ್ ವಿಭಜಕದ ಎತ್ತರದಲ್ಲಿರುವಂತೆ ಭಾಸವಾಗುತ್ತಿದೆ. ಈ ಹಂಪುಗಳಿಗೆ ಬಣ್ಣ ಬಳಿದು ಸವಾರರಿಗೆ ಸರಿಯಾಗಿ ಕಾಣುವಂತೆ ಮಾಡಲಾಗಿಲ್ಲ. ಇದ್ದಕ್ಕಿದ್ದಂತೆ ಏರಿ ಇಳಿಯುವಾಗ ವಾಹನಗಳ ಭಾಗಗಳು ಈ ಹಂಪುಗಳಿಗೆ ಒರಸಿ ಹಾನಿ ಸಂಭವಿಸುತ್ತಿದೆ. ವಾಹನವನ್ನು ನಿಯಂತ್ರಣಕ್ಕೆ ತರಲು ಅಸಾಧ್ಯವಾಗುತ್ತಿದೆ.
ಸ್ಥಳೀಯ ಪಂಚಾಯತ್ ಜವಾಬ್ದಾರಿಯಿಂದ ವರ್ತಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಬೇಕಾಗಿದೆ.

 
* ಚೇತನ್, ನವೀನ್, ಚಂದ್ರಹಾಸ್, ಬೈಕ್ ಸವಾರರು, ಕಿನ್ನಿಗೋಳಿ