ಅವೈಜ್ಞಾನಿಕ ಚರಂಡಿ ನಿರ್ಮಾಣ

ಕರಾವಳಿ ಅಲೆ  ವರದಿ

ಕಾರ್ಕಳ : ಇಲ್ಲಿನ ಪುರಸಭಾ ಆಡಳಿತ ಕೆಲವರ ಇಷ್ಟದಂತೆ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದ್ದು, ರಸ್ತೆಯಂಚಿನಲ್ಲೇ ಚರಂಡಿ ನಿರ್ಮಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭಾ ವ್ಯಾಪ್ತಿಯ ಕಾರ್ಕಳ ಅನಂತಶಯನದಿಂದ ಚರಂಡಿ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಈ ಹಿಂದೆ ನಿರ್ಣಯಿಸಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಏಳೇಳು ಅಡಿಗಳಷ್ಟು ಜಾಗ ಬಿಟ್ಟು ಕೊಡಬೇಕೆನ್ನುವ ನಿರ್ಣಯವನ್ನು ಗಾಳಿಗೆ ತೂರಿರುವುದು ಇಲ್ಲಿ ಸ್ಪಷ್ಟವಾಗಿದೆ. ಜಾಗದ ಮಾಲಿಕರ ನಿರ್ಣಯವೇ ಅಂತಿಮವಾಗಿದ್ದು, ಪುರಸಭೆ ನಿರ್ಣಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕಾರ್ಕಳ ಪೇಟೆಯ ರಸ್ತೆ ಅಗಲೀಕರಣ ನಡೆಯಬೇಕೆನ್ನುವುದು ಕಾರ್ಕಳ ಜನತೆಯ ಬಹುಕಾಲದ ಕನಸಾಗಿತ್ತು. ಇದೀಗ ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಗಳಿಂದ ಜನರ ಕನಸು ಕಮರಿ ಹೋಗುತ್ತಿರುವುದು ಸ್ಪಷ್ಟ. ಆದರೆ ಜಿಲ್ಲಾಡಳಿತ ಇವೆಲ್ಲವನ್ನೂ ನೋಡಿಯೂ ನೋಡದಂತಿರುವುದು ಮಾತ್ರ ಜನತೆ ಮತ್ತಷ್ಟು ಕೆರಳುವಂತೆ ಮಾಡಿದೆ.

ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡದೆ ಚರಂಡಿ ನಿರ್ಮಾಣವಾಗುತ್ತಿದ್ದು, ಮುಖ್ಯರಸ್ತೆಯ ಆರಾಮ್ ಫರ್ನಿಚರ್ ಮುಂಭಾಗದಲ್ಲಿ 7 ಅಡಿ ಜಾಗ ಬಿಟ್ಟುಕೊಡದೆ ರಸ್ತೆಯ ಅಂಚಿನಲ್ಲೆ ಚರಂಡಿ ಕಾಮಗಾರಿ ನಡೆಯುತ್ತಿದೆ. ಅದನ್ನು ತಕ್ಷಣ ಸ್ಥಗಿತಗೊಳಿಸಿ ಹಣ ಪೋಲಾಗುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟಿಸುವುದಾಗಿ ಪುರಸಭೆ ಪ್ರತಿಪಕ್ಷ ಸದಸ್ಯರು ಮುಖ್ಯಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.

 

 

 

LEAVE A REPLY