ರಾಜ್ಯದಲ್ಲಿ ಕಂಡು ಕೇಳರಿಯದ ಬರ

ರಾಜ್ಯ ಕಳೆದ ನಾಲ್ಕು ದಶಕಗಳಲ್ಲಿಯೇ ಕಂಡರಿಯದಂತಹ ಗಂಭೀರ ನೀರಿನ ಸಮಸ್ಯೆ ಎದುರಿಸುತ್ತಿದೆ.

 ವಿಶೇಷ ವರದಿ

ಕಾವೇರಿ ನದಿ ನೀರು ಸಂಗ್ರಹವಾಗುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಕಳೆದ 15 ವರ್ಷಗಳಲ್ಲಿಯೇ ಈ ಬಾರಿ ಅತ್ಯಧಿಕ ಕುಸಿತ ಕಂಡಿದೆ. ನೀರಿನ ಮಟ್ಟ ಈಗ ಡೆಡ್ ಸ್ಟೋರೇಜ್ ಹಂತಕ್ಕೆ ಬಂದಿದ್ದು ಇದು ಜಲಾಶಯದಿಂದ ನೀರು ಹೊರಹೋಗುವ ಪ್ರವೇಶ ದ್ವಾರಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದಿದೆ. ಇಷ್ಟೊಂದು ಕೆಳಮಟ್ಟದಲ್ಲಿರುವ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲವಾಗಿದ್ದು ಬೇಸಿಗೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಅಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಕಳೆದ ನಾಲ್ಕು ದಶಕಗಳಲ್ಲಿಯೇ ಕಂಡರಿಯದಂತಹ ಗಂಭೀರ ನೀರಿನ ಸಮಸ್ಯೆ ಎದುರಿಸುತ್ತಿದೆ. ರಾಜ್ಯ ಪ್ರಾಕೃತಿಕ ವಿಕೋಪ  ನಿರ್ವಹಣಾ ಘಟಕದ ಪ್ರಕಾರ ರಾಜ್ಯದಲ್ಲಿನ ಯಾವುದೇ  ಜಲಾಶಯದ ಸ್ಥಿತಿಯೂ ಭಿನ್ನವಾಗಿಲ್ಲ. ಈಗ ಕೃಷಿ ಉದ್ದೇಶಗಳಿಗಿಂತ ಹೆಚ್ಚಾಗಿ ಕುಡಿಯುವ ನೀರು ಒದಗಿಸಲು ಸರಕಾರ ಹೆಚ್ಚಿನ ಗಮನ ನೀಡುತ್ತಿದೆ.  ಈ ವರ್ಷ ಕೂಡ ಸರಾಸರಿಗಿಂತ ಕಡಿಮೆ ಮಳೆಯಾದಲ್ಲಿ ಪರಿಸ್ಥಿತಿ ಕಳೆದ ವರ್ಷಕ್ಕಿಂತಲೂ ಬಿಗಡಾಯಸಲಿದೆ ಎಂದು ಘಟಕದ  ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳುತ್ತಾರೆ.

ರಾಜ್ಯದ ಶೇ 75ರಷ್ಟು ಮಿನಿ ನೀರಾವರಿ ಟ್ಯಾಂಕುಗಳು  ನೀರಿಲ್ಲದೆ ಬಣಗುಡುತ್ತಿದ್ದು  ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಗಮನಿಸಿದಲ್ಲಿ ಈ ಬಾರಿ ಅಂತರ್ಜಲ ಮಟ್ಟ ಶೇ 80ರಷ್ಟು ಕಡಿಮೆಯಾಗಿದೆ.

“ಪ್ರಸಕ್ತ 600 ಗ್ರಾಮಗಳಿಗೆ ಟ್ಯಾಂಕರುಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 400 ವಾರ್ಡುಗಳಲ್ಲಿ ಇದೇ ಸ್ಥಿತಿ ಇದೆ. ದನಗಳಿಗೆ ಮೇವಿನ ಕೊರತೆಯೂ ಎದುರಾಗಿದೆ” ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಎದುರಿಸುತ್ತಿದ್ದ ನೀರಿನ ಸಮಸ್ಯೆಯಿಂದಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ರಾಜ್ಯ ನಿರಾಕರಿಸಿದ ಹಿನ್ನೆಲೆಯಲ್ಲಿ ನೆರೆಯ ರಾಜ್ಯ ಪ್ರಧಾನಿ ಮಧ್ಯಪ್ರವೇಶಕ್ಕೆ ಕೋರಿತ್ತು. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಮೀರಿ ಹಿಂಸೆಗೆ ತಿರುಗಿತ್ತಲ್ಲದೆ ಎರಡೂ ರಾಜ್ಯಗಳ ನಡುವೆ ವಾಹನ ಸಂಚಾರ ಕೂಡ ವ್ಯತ್ಯಯಗೊಂಡಿತ್ತು.

ಇದೀಗ ರಾಜ್ಯ ಸರಕಾರ ಮೋಡ ಬಿತ್ತನೆ ಹಾಗೂ ಕೃತಕ ಮಳೆಗಾಗಿ ರೂ 30 ಕೋಟಿ ನಿಗದಿಪಡಿಸಿದ್ದು  ಎಲ್ಲಾ ರೈತರೂ ಬೆಳೆವಿಮೆ ಹೊಂದಿರುವಂತೆ ಮಾಡಲು ಶ್ರಮಿಸುತ್ತಿದೆ.

ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಸರಾಸರಿಗಿಂತ ಶೇ 40ರಿಂದ 70ರಷ್ಟು ಕಡಿಮೆ ಮಳೆಯಾಗಿದೆ. ಕೃಷಿ ಇಳುವರಿಯೂ ಶೇ 50ಕ್ಕೆ ಇಳಿದಿದೆ. ಸರಕಾರ ಮೇವು ಬ್ಯಾಂಕುಗಳನ್ನು ಸ್ಥಾಪಿಸಿದೆ.  ಒಟ್ಟು 176 ತಾಲೂಕುಗಳಲ್ಲಿ 160 ತಾಲೂಕುಗಳು ಬರಪೀಡಿತವೆಂದು ಘೋಷಿತವಾಗಿವೆ. ಬರಪರಿಹಾರಕ್ಕೆಂದು ಕೇಂದ್ರ ಸರಕಾರವು ರಾಜ್ಯಕ್ಕೆ ರೂ 17,000 ಕೋಟಿ ಮಂಜೂರುಗೊಳಿಸಿದೆ.