ವಾಹನವಿಲ್ಲದಿದ್ದರೂ ಪೊಲೀಸರಿಂದ ಹಳೆ ಮಾಲಕರಿಗೆ ಟ್ರಾಫಿಕ್ ಉಲ್ಲಂಘನೆ ನೋಟಿಸು

ಸಾಂದರ್ಭಿಕ ಚಿತ್ರ

ಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೆಲವು ಸಮಯದ ಹಿಂದೆ ತಮ್ಮ ವಾಹನ ಬೇರೆಯವರಿಗೆ ಮಾರಾಟ ಮಾಡಲಾಗಿ, ಅವರ ಹೆಸರಲ್ಲಿ ಆ ವಾಹನ ನೋಂದಾವಣೆಯಾಗಿದ್ದರೂ, ಮಂಗಳೂರು ನಗರ ಪೊಲೀಸರು ಮಾಜಿ ಮಾಲಕರಿಗೆ `ಸಂಚಾರಿ ನಿಯಮ ಉಲ್ಲಂಘನೆ’ ನೋಟಿಸು ಜಾರಿ ಮಾಡುವುದು ಈಗ ರೂಢಿಯಾಗಿದೆ. ಇಂತಹ ಕೆಲವಾರು ದೂರುಗಳು ಬಂದಿದ್ದು, ಪೊಲೀಸ್ ಕಾರ್ಯ ದಕ್ಷತೆಗೆ ಹಿಡಿದ ಕನ್ನಡಿಯಂತಾಗಿದೆ.

ಮಾಜಿ ವಾಹನ ಮಾಲಕ ಜಯರಾಮ (ಹೆಸರು ಬದಲಿಸಲಾಗಿದೆ) ಎಂಬವರು ಮಂಗಳೂರು ನಗರ ಪೊಲೀಸರಿಂದ ರಸ್ತೆ ನಿಯಮ ಉಲ್ಲಂಘಿಸಿದ ಬಗ್ಗೆ ಒಂದೆರಡು ನೋಟಿಸು ಪಡೆದುಕೊಂಡಿದ್ದು, ಈ ಎಡವಟ್ಟಿನ ವಿರುದ್ಧ ಟ್ರಾಫಿಕ್ ಪೊಲೀಸರಲ್ಲಿ ದೂರಿಕೊಂಡಿದ್ದರೂ, ಪೊಲೀಸರಿಂದ ಹಾರಿಕೆ ಉತ್ತರ ಸಿಕ್ಕಿದೆ.

ಜಯರಾಮರು ವ್ಯಕ್ತಿಯೊಬ್ಬರಿಗೆ ತನ್ನ ಕಾರು ಮಾರಾಟ ಮಾಡಿ, ವರ್ಗಾವಣೆ ನೋಂದಣಿ ಮಾಡಿಕೊಂಡಿದ್ದರು. ಇದಕ್ಕೆ ಸಾರಿಗೆ ಇಲಾಖೆಯಲ್ಲಿ ದಾಖಲೆ ಲಭ್ಯವಿದೆ. ಎರಡನೇ ಮಾಲಕರು ಕಾರನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದು, 2017 ಮಾರ್ಚ್ 18ರಂದು ಮರು ನೋಂದಣಿಯೂ ಆಗಿದೆ. ಆದರೆ ಈ ಕಾರು `ಪಿವಿಎಸ್ ಸರ್ಕಲಿನ ಬಳಿ ರಸ್ತೆ ನಿಯಮ ಉಲ್ಲಂಘಿಸಿದೆ’ ಎಂದು ಜಯರಾಮರಿಗೆ ನೋಟಿಸು ಬಂದಿದೆ.

ಜಯರಾಮರು ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಗೆ ವಿಚಾರಿಸಿದಾಗ, “ನಮ್ಮಲ್ಲಿ ಏನೂ ಹೇಳಬೇಡಿ ಎಂದ ಪೊಲೀಸ್ ನಿರೀಕ್ಷಕರು, ಆರ್ ಟಿ ಒ ಸಂಪರ್ಕಿಸಿ ಎಂಬ ಒರಟಾಗಿ ಪ್ರತಿಕ್ರಿಯಿಯಿಸಿದ್ದಾರೆ” ಎಂದಿದ್ದಾರೆ.

ಆರ್ ಟಿ ಒ.ನಲ್ಲಿ ವಿಚಾರಿಸಿದಾಗ ಅಲ್ಲಿನ ದಾಖಲೆಗಳು ಸರಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಆಗಿರುವ ತಪ್ಪು ಬೆಳಕಿಗೆ ಬಂದಿದೆ. ಅಂದರೆ, ಪೊಲೀಸ್ ಇಲಾಖೆಯಲ್ಲಿ ಇತ್ತೀಚಿನ ವರದಿ ಇಟ್ಟುಕೊಂಡಿಲ್ಲ. ಬಳಿಕ ಪೊಲೀಸ್ ಆಯುಕ್ತರ ಸಂಪರ್ಕಿಸಿದಾಗ ತನಿಖೆಯ ಭರವಸೆ ಸಿಕ್ಕಿದೆ.

ಪೊಲೀಸ್ ಇಲಾಖೆಗೆ ಸಾರಿಗೆ ಇಲಾಖೆಯ ಡಾಟಾ ಸಂಪರ್ಕ ನೀಡಲಾಗಿದೆ. ಇದರಿಂದ ಹೊಸ ಮಾಹಿತಿ ಪಡೆದುಕೊಳ್ಳಬಹುದೆಂದು ಮಂಗಳೂರಿನ ಉಸ್ತುವಾರಿ ಹಿರಿಯ ಆರ್ ಟಿ ಒ ತಿಳಿಸಿದ್ದಾರೆ.

ಪೊಲೀಸ್ ಸಿಸ್ಟಂಗೆ ಸಾರಿಗೆ ಇಲಾಖೆ ಡಾಟಾ ಸಂಪರ್ಕ ಅವಶ್ಯ. ಇಲ್ಲದಿದ್ದರೆ ಇಂತಹ ತಪ್ಪುಗಳಾಗುತ್ತವೆ ಎಂದು ಹೆಚ್ಚುವರಿ ಪೊಲೀಸ್ ಮಹಾ-ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.