`ವಿನಾಕಾರಣ ನಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ’

ಸುದ್ದಿಗಾರರಲ್ಲಿ ಮಾತಾಡಿದ ಮಲ್ಲಿಕ್ ಜೈನ್, ಉದಯ್ ಜೈನ್ ಮತ್ತು ಧೀರಜ್ ಕೆಲ್ಲ

ಶಂಕಿತ ಆರೋಪಿಗಳ ಸ್ಪಷ್ಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ವಿನಾಕಾರಣ ಕಳಂಕ ಹಚ್ಚಲಾಗುತ್ತಿದ್ದು, ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಶಂಕಿತ ಆರೋಪಿಗಳೆನ್ನಲಾಗಿರುವ ಮಲ್ಲಿಕ್ ಜೈನ್, ಉದಯ್ ಜೈನ್ ಮತ್ತು ಧೀರಜ್ ಕೆಲ್ಲ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರಲ್ಲಿ ಮಾತನಾಡಿದ ಅವರು, “ಕಳೆದ ಮಾರ್ಚ್ ತಿಂಗಳಿನಲ್ಲಿ ಸಿಬಿಐ ಅಧಿಕಾರಿಗಳು ನಮ್ಮನ್ನು ಎಲ್ಲಾ ರೀತಿಯ ತನಿಖೆಗೆ ಒಳಪಡಿಸಿದ್ದಾರೆ. ಹೀಗಿದ್ದರೂ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಲೇ ಬರಲಾಗುತ್ತಿದೆ. ಸೌಜನ್ಯಾ ಹತ್ಯೆಗೆ ಸಂಬಂಧಿಸಿದಂತೆ ನಮ್ಮ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಕೆಲವು ವ್ಯಕ್ತಿಗಳು ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನಾವು ಈ ಹಿಂದೆ ಪೊಲೀಸರಿಗೆ ನೀಡಿದ ಸಹಕಾರದಂತೆ ಮುಂದೆಯೂ ಸಹಕಾರ ನೀಡಲು ಸಿದ್ಧರಿದ್ದೇವೆ. ನಮ್ಮ ಮೇಲಿನ ಕಳಂಕ ತಪ್ಪಬೇಕು ಮತ್ತು ತಪ್ಪಿತಸ್ಥ ಯಾರು ಎನ್ನುವುದು ಬಹಿರಂಗಗೊಳ್ಳಬೇಕು ಅನ್ನುವುದು ನಮ್ಮ ಆಗ್ರಹ ಕೂಡಾ ಆಗಿದೆ” ಎಂದರು.

“ಎರಡು ದಿನಗಳ ಹಿಂದೆ ಪತ್ರಿಕಾಭವನದಲ್ಲಿ ಸೌಜನ್ಯಾ ತಂದೆ, ತಾಯಿ ಸುದ್ದಿಗೋಷ್ಠಿ ನಡೆಸಿ ಮಲ್ಲಿಕ್, ಉದಯ್ ಮತ್ತು ಧೀರಜ್ ಅವರ ಮಂಪರು ಪರೀಕ್ಷೆಯನ್ನು ಮತ್ತೆ ಮಾಡಬೇಕೆಂದು ಕೋರಿಕೊಂಡಿದ್ದಾರೆ. ಆದರೆ ನಾವು ಈಗಾಗಲೇ ಸಂಪೂರ್ಣ ಸಹಕಾರ ನೀಡಿದ್ದು, ಮುಂದೆಯೂ ಸಹಕರಿಸಲಿದ್ದೇವೆ” ಎಂದರು.

“ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಸೌಜನ್ಯಾ ಮಾವ ವಿಠಲ ಗೌಡರನ್ನೂ ಮಂಪರು ಪರೀಕ್ಷೆಗೊಳಪಡಿಸಬೇಕು” ಎಂದ ಅವರು, “ವಿಠಲ ಗೌಡರ ನಡವಳಿಕೆಗಳು ನಮಗೆ ಸಂಶಯಾಸ್ಪದವಾಗಿದೆ” ಎಂದರು.