ಜಿಲ್ಲಾ ಪೊಲೀಸರು ವರದಿಗಾರನ ಮೇಲೆ ಮುಗಿಬಿದ್ದಿರುವುದರ ಹಿಂದೆ ಕಾಣದ ಕೈಗಳು ಇರಬಹುದೇ

ಬಂಟ್ವಾಳ ಪೊಲೀಸರು ವಾರ್ತಾ ಭಾರತಿ ವರದಿಗಾರ ಇಮ್ತಿಯಾಜ್ ತುಂಬೆ ಮೇಲೆ ಐಪಿಸಿ 153ಎ ಮತ್ತಿತರ ಕಲಮುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ 153ಎ ಎರಡು ಧರ್ಮಗಳ ಅನುಯಾಯಿಗಳ ಮಧ್ಯೆ ಕಲಹಕ್ಕೆ ಪ್ರಚೋದನೆ ನೀಡುವುದನ್ನು ಅಪರಾಧವೆಂದು ಪರಿಗಣಿಸುತ್ತದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಇಮ್ತಿಯಾಜ್ ವರದಿ ಯಾವೆರಡು ಧರ್ಮಗಳ ನಡುವೆ ಕಲಹಕ್ಕೆ ಪ್ರಚೋದನೆ ನೀಡಿದೆ ಎಂಬುದು ಸ್ಪಷ್ಟವಾಗಿಲ್ಲ ಹೆಚ್ಚೆಂದರೆ ಆ ವರದಿ ಒಂದೇ ಧರ್ಮದವರು ಪೊಲೀಸರ ಮೇಲೆ ಆಕ್ರೋಶಗೊಳ್ಳಲು ಅವರ ವಿರುದ್ಧ ಪ್ರತಿಭಟಿಸಲು ಮತ್ತು ಪ್ರಕರಣ ದಾಖಲಿಸಲು ಹೇತುವಾಗಬಹುದು. ಅದಕ್ಕಿಂತ ಹೆಚ್ಚಿನದೇನೂ ಆಗುವ ಸಾಧ್ಯತೆಗಳು ಇಲ್ಲವೆಂದೇ ಹೇಳಬಹುದು. ಹೀಗಿರುವಾಗ ಒಬ್ಬ ವರದಿಗಾರನಾಗಿ ತನ್ನ ಕರ್ತವ್ಯ ಮಾಡಿದ ಇಮ್ತಿಯಾಜ್ ಮೇಲೆ ಪೊಲೀಸರು ಹೀಗೆ ಮುಗಿಬಿದ್ದಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇರಬಹುದೇ ಅಥವಾ ಆತನನ್ನು ಆತನ ಧರ್ಮದ ಕಾರಣಕ್ಕೆ ಗುರಿಮಾಡಲಾಗಿದೆಯೇ ಹೀಗೆ ಅನುಮಾನಿಸಲು ಕೆಲ ಕಾರಣಗಳಿವೆ. ಅವು ಜಿಲ್ಲೆಯ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಗೆ ಸಂಬಂಧಪಟ್ಟಿವೆ ನೈತಿಕ ಗೂಂಡಾಗಿರಿ ಇರಲಿ ಗೋರಕ್ಷಕರ ಹಲ್ಲೆಗಳಿರಲಿ, ಧರ್ಮ ಪ್ರಚಾರಕರ ಮೇಲಿನ ದಾಳಿಗಳಿರಲಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಪೊಲೀಸರ ವರ್ತನೆ ಜಾತ್ಯತೀತತೆಗೆ ವಿರುದ್ಧವಾಗಿ ಪಕ್ಷಪಾತೀಯವಾಗಿರುವುದನ್ನು ಕಂಡಿದ್ದೇವೆ ದಾಳಿಕೋರರ ಬದಲು ದಾಳಿಗೀಡಾದವರನ್ನೇ ಗುರಿಯಾಗಿಸುವುದನ್ನು ಕಂಡಿದ್ದೇವೆ. ಜಿಲ್ಲೆಯ ಶೇಕಡಾ 60ರಷ್ಟು ಪೊಲೀಸರು ಹಿಂದೂತ್ವವಾದದ ಬೆಂಬಲಿಗರು ಎಂಬ ಭಯಾನಕ ಸತ್ಯವನ್ನು ಬಯಲುಗೊಳಿಸಿರುವ ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯ ವರದಿಯೂ ಇದಕ್ಕೆ ಪೂರಕವಾಗಿದೆ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ತಮ್ಮ ಕಚೇರಿಗಳಲ್ಲಿ ಠಾಣೆಗಳಲ್ಲಿ ಜಾತ್ಯತೀತತೆಯ ಆಶಯಗಳಿಗೆ ವಿರುದ್ಧವಾಗಿ ಕೇವಲ ನಿರ್ದಿಷ್ಟ ಧರ್ಮವೊಂದರ ಪೂಜೆ ಪುನಸ್ಕಾರಗಳು ನಡೆಯಲು ಬಿಟ್ಟಿವೆ ಅಲ್ಲಿ ನಿಯಮಿತವಾಗಿ ಸಲ್ಲುವ ಪೂಜೆ ಪುನಸ್ಕಾರಗಳನ್ನು ನೋಡುವ ಹೊರಗಿನವರಲ್ಲಿ ಇದು ಜಾತ್ಯತೀತ ರಾಷ್ಟ್ರವೊಂದರ ಕಚೇರಿಯೇ ಇಲ್ಲಿನ ಆಡಳಿತಕ್ಕೆ ಸಂವಿಧಾನದ ಜಾತ್ಯತೀತತೆಯಲ್ಲಿ ನಂಬಿಕೆ ಇದೆಯೇ ಎಂಬ ಸಂಶಯ ಮೂಡುವುದು ಸಹಜವೇ ಆಗಿದೆ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆ ಮೊದಲು ತಂತಮ್ಮ ಕಚೇರಿಗಳಲ್ಲಿ ನಡೆಯುವ ಇಂತಹ ಸಂವಿಧಾನ ವಿರೋಧಿ ಆಚರಣೆಗಳನ್ನು ಕೂಡಲೆ ನಿಲ್ಲಿಸಲಿ ತಮ್ಮ ಸಿಬ್ಬಂದಿ ವರ್ಗಕ್ಕೆ ಜಾತ್ಯತೀತತೆ ವಿಷಯದಲ್ಲಿ ಪಾಠ ಹೇಳಲಿ ಧರ್ಮವನ್ನು ಅವರವರ ಮನೆಗಳಿಗೆ ಸೀಮಿತಗೊಳಿಸುವಂತೆ ನಿರ್ಬಂಧಿಸಲಿ

  • ಸುರೇಶ ಭಟ್  ಬಾಕ್ರಬೈಲು