ರಸ್ತೆ ಕಾಮಗಾರಿ ಪೂರ್ಣಗೊಳಿಸದ್ದಕ್ಕೆ ತಡೆಗೋಡೆ ಕಟ್ಟಿ ವಿನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಫರಂಗಿಪೇಟೆ ಸಮೀಪದ ಬಡ್ಡೂರುನಿಂದ ಪಕ್ಕಲಪಾದೆವರೆಗಿನ ರಸ್ತೆ ಕಾಮಗಾರಿ ಹತ್ತು ವರ್ಷ ಕಳೆದರೂ ಪೂರ್ಣಗೊಳ್ಳದ ಬಗ್ಗೆ ದೂರಿ ಹತಾಶರಾದ ಗ್ರಾಮಸ್ಥರು ರಸ್ತೆಗೆ ತಡೆಗೋಡೆ ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರನ್ನು ಎಚ್ಚರಿಸುವ ಪ್ರಯತ್ನ ನಡೆಸಿದರು.

ಬಡ್ಡೂರಿನಿಂದ ಪಕ್ಕಲಪಾದೆವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಕೆಲವೇ ಕೆಲವು ಮನೆಗಳಿಗೆ ಅನುಕೂಲವಾಗುವಂತೆ ಮಾತ್ರ ನಿರ್ಮಿಸಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ರಸ್ತೆಯಿಂದಾಗಿ ಕೇವಲ ನಾಲ್ಕೈದು ಮನೆಗಳಿಗೆ ಮಾತ್ರ ಉಪಯೋಗವಾಗುತ್ತಿದ್ದು, ಮಿಕ್ಕ 200ಕ್ಕೂ ಹೆಚ್ಚು ಮನೆಗಳಿಗೆ ಇದು ತೊಂದರೆಯಾಗಿ ಮಾರ್ಪಟ್ಟಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರಿಕೊಂಡರೂ ಸ್ಪಂದನೆ ಮಾತ್ರ ಶೂನ್ಯ.

ರಸ್ತೆ ಪೂರ್ಣಗೊಳಿಸುವ ಗ್ರಾಮಸ್ಥರ ಬೇಡಿಕೆಗೆ ಸ್ಥಳೀಯವಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಯಾಗಿದ್ದಾರೆ ಎನ್ನಲಾಗಿದ್ದು, ಪರಿಣಾಮ ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಬಡ್ದೂರ್ ಸಾನದ ಬಳಿಯ ರಸ್ತೆಗೆ ಬಡ್ದೂರ್ ಭಜನಾ ಮಂದಿರ ಬಳಿ ತಡೆಗೋಡೆ ಕಟ್ಟಿ ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದರು. ಇನ್ನಾದರೂ ಸಂಬಂಧಪಟ್ಟವರು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ರಸ್ತೆ ಕಾಮಗಾರಿ ಮುಂದುವರಿಕೆಗೆ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.