ಅಪಘಾತದಲ್ಲಿ ಗಾಯಗೊಂಡ ಅಪರಿಚಿತ ಮಹಿಳೆ ಮೃತ

ಸಾಂದರ್ಭಿಕ ಚಿತ್ರ

ಉಡುಪಿ : ನಗರದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ಸುಮಾರು 55 ವರ್ಷದ ಮಹಿಳೆಗೆ ಬೈಕೊಂದು ಡಿಕ್ಕಿ ಹೊಡೆದು ತಲೆಗೆ ತೀವ್ರತರಹದ ಗಾಯವಾದ ಘಟನೆ ಆಗಸ್ಟ್ 4ರಂದು ನಡೆದಿತ್ತು. ಪ್ರಕರಣ ಮಣಿಪಾಲ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಗಾಯಾಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಂಬುಲೆನ್ಸ್ ಮುಖಾಂತರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ತಲೆ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಮಹಿಳೆ ಮಾತನಾಡುವ ಸ್ಥಿತಿಯಲ್ಲಿಲ್ಲದರಿಂದ ಮಹಿಳೆಯ ಪೂರ್ವಾಪರ ತಿಳಿಯಲಿಲ್ಲ. ಚಿಕಿತ್ಸೆಗೆ ಸ್ಪಂದಿಸದ ಮಹಿಳೆ ಆಗಸ್ಟ್ 11ರಂದು ಮೃತಪಟ್ಟರು.

ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ನೀಡಿಯೂ ವಾರಸುದಾರರು ಬಾರದ ಕಾರಣ ಶನಿವಾರ ಶವಮಹಜರು ಕಾನೂನು ಪ್ರಕ್ರಿಯೆಗಳು ನಡೆದ ನಂತರ ಪೆÇಲೀಸರ ಸಮಕ್ಷಮ ನಿತ್ಯಾನಂದ ಒಳಕಾಡು ಮುಂದಾಳತ್ವದಲ್ಲಿ ಸಾಮಾಜಿಕ ಕಾರ್ಯಕರ್ತ ಶಿರೂರು ತಾರಾನಾಥ್ ಮೇಸ್ತರ ಸಹಕಾರದೊಂದಿಗೆ ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ದಫನ ಮಾಡಲಾಯಿತು. ಇದು ಸಮಾಜಸೇವಕ ನಿತ್ಯಾನಂದ ಒಳಕಾಡು ನೆಡೆಸಿದ ವಾರಸುದಾರರಿಲ್ಲದ 12ನೇ ಶವಸಂಸ್ಕಾರ.