ಅಚ್ಚಡದಲ್ಲಿ ಹಾರೆಯಿಂದ ಕಡಿದು ಅಪರಿಚಿತ ಕೊಲೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಟಪಾಡಿಯ ಅಚ್ಚಡ ಎಂಬಲ್ಲಿನ ಖಾಸಗಿ ಸ್ಥಳವೊಂದರಲ್ಲಿ ಅಪರಿಚಿತನೊಬ್ಬನ್ನು ಹಾರೆಯಿಂದ ಕಡಿದು ಕೊಲೆ ಮಾಡಲಾಗಿದ್ದು, ಈ ಕೃತ್ಯ ಕಳೆದ ರಾತ್ರಿಯೇ ನಡೆದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕಟಪಾಡಿಯ ನಯನ ಸಂಸ್ಥೆಯ ಪ್ರಕಾಶ್ ಎಂಬವರಿಗೆ ಸೇರಿದ ಖಾಸಗಿ ಸ್ಥಳ ಅಚ್ಚಡ ಎಂಬಲ್ಲಿ ಈ ಕೃತ್ಯ ನಡೆದಿತ್ತು. ಸುತ್ತಲೂ ಮನೆಯಿರುವ ಈ ಸ್ಥಳಕ್ಕೆ ಆವರಣ ಗೋಡೆಯ ರಕ್ಷೆ ಇದೆ. ಈ ಜಾಗದಲ್ಲಿ ಬಾವಿಯೊಂದಿದ್ದು ಅದಕ್ಕೆ ನೂತನ ಕಟ್ಟೆ ನಿರ್ಮಾಣ ಕಾರ್ಯ ಕೆಲವು ದಿನಗಳಿಂದ ನಡೆಯುತ್ತಿತ್ತು. ಶನಿವಾರ ಕೂಡಾ ಈ ಕಟ್ಟೆಯ ಕಾರ್ಯ ನಡೆಸಿದ ಮೇಸ್ತ್ರಿ ಸಲಕರಣೆಗಳನ್ನು ತೊಳೆದು ಪಕ್ಕದಲ್ಲೇ ಇರಿಸಿ ಮರಳಿದ್ದರು. ರವಿವಾರ ಬೆಳಿಗ್ಗೆ ಸಿಮೆಂಟು ಗಾರೆಗೆ ನೀರು ಚಿಮ್ಮಿಸಲು ಬಂದ ವ್ಯಕ್ತಿಗೆ ಮರಳು ರಾಶಿಯ ಮೇಲೆ ಕೊಲೆಯಾಗಿ ಬಿದ್ದ ವ್ಯಕ್ತಿಯ ಕಳೆಬರ ಕಂಡಿದೆ. ತಕ್ಷಣ ಸ್ಥಳೀಯರ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು ಸ್ಥಳಕ್ಕೆ ಬಂದ ಕಾಪು ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಸ್ಥಳಕ್ಕೆ ಬಂದ ಶ್ವಾನದಳ ಕಾರ್ಯಾಚರಿಸಿದ್ದು, ನೇರವಾಗಿ ಸ್ಥಳದಿಂದ ಒಳರಸ್ತೆಯ ಮೂಲಕ ಮುಂದೆ ಸಾಗಿ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಅಚ್ಚಡದ ಬಸ್ ತಂಗುದಾಣ ಬಳಿ ಹೋಗಿ ನಿಂತಿದೆ.

ಕೊಲೆ ನಡೆಸಿದ ಪಾತಕಿಗಳು ಯಾವುದೇ ವಾಹನಗಳಲ್ಲಿ ಬಾರದೆ ನಡೆದುಕೊಂಡೇ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನೇರವಾಗಿ ನಡೆದುಕೊಂಡು ಬಂದು ಬಸ್ ತಂಗುದಾಣ ಸೇರಿ ರಸ್ತೆಯಲ್ಲಿ ಬಂದ ವಾಹನವೇರಿ ಪರಾರಿಯಾಗಿರಬಹುದೆಂಬುದಾಗಿ ಶಂಕಿಸಲಾಗಿದೆ.  ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ವ್ಯಕ್ತಿ ಕಟಪಾಡಿ ಸರ್ಕಾರಿ ಗುಡ್ಡೆಯ ನಿವಾಸಿಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದರಾದರೂ ದೃಢಪಟ್ಟಿಲ್ಲ.

ಕೊಲೆಯಾದ ಸ್ಥಳದಲ್ಲಿ ಹತ್ಯೆಗೆ ಬಳಸಲಾದ ಹಾರೆ ಹಾಗೂ ಮೊಸರಿನ ಪ್ಯಾಕೇಟ್ ಪತ್ತೆಯಾಗಿದೆ. ಮೊಸರಿನ ಪ್ಯಾಕೇಟ್ ಗಮನಿಸಿದರೆ ಈ ಕೊಲೆ ಶನಿವಾರ ರಾತ್ರಿಯೇ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆಯಾದರೂ, ಹೊರಚಿಮ್ಮಿದ ರಕ್ತದ ಬಣ್ಣ ಅಷ್ಟೇನೂ ಬದಲಾಗದಿರುವುದರಿಂದ ಈ ಕೊಲೆ ಬೆಳಿಗ್ಗೆ ನಡೆದಿರಬಹುದು ಎಂಬ ಶಂಕೆಯೂ ಪೊಲೀಸರದ್ದಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.

ವೈಯಕ್ತಿಕ ದ್ವೇಷ ಕಾರಣ ?

ಕೊಲೆಯಾದ ವ್ಯಕ್ತಿ ಹೊರಜಿಲ್ಲೆಯವರಂತೆ ಕಾಣುತ್ತಿದ್ದು, ತಮ್ಮೂರಿನ ವೈಯಕ್ತಿಕ ಧ್ವೇಷಕ್ಕಾಗಿ ಇಲ್ಲಿ ಈ ವ್ಯಕ್ತಿಯನ್ನು ಈ ರೀತಿ ಭೀಕರವಾಗಿ ಹತ್ಯೆ ಮಾಡಲಾಯಿತೇ  ಎಂಬ ಸಂಶಯವೂ ಜನರನ್ನು ಕಾಡುತ್ತಿದೆ. ಕೊಲೆ ನಡೆಸಿ ಪರಾರಿಯಾದ ರಸ್ತೆಯಲ್ಲಿ ಬಹಳಷ್ಟು ಐಶಾರಾಮಿ ಮನೆಗಳಿದ್ದು, ಸೀಸಿ ಕ್ಯಾಮರಾ ಕಾರ್ಯಾಚರಿಸುವ ಸಾಧ್ಯತೆ ಇದ್ದ ಪರಿಣಾಮ ಪೊಲೀಸ್ ತನಿಖೆಗೆ ಉಪಯೋಗ ಆಗಬಹುದಾಗಿದೆ. ಒಟ್ಟಿನಲ್ಲಿ ಸುತ್ತಲೂ ಮನೆಗಳಿರುವ ಈ ಪ್ರದೇಶವನ್ನೇ ಈ ಕೃತ್ಯಕ್ಕೆ ಫಾತಕಿಗಳು ಉಪಯೋಗಿಸಿದ್ದು ಮಾತ್ರ ಆಶ್ಚರ್ಯವಾಗಿದೆ.

 

 

LEAVE A REPLY