ಪಶ್ಚಿಮ ಘಟ್ಟವನ್ನು ರಕ್ಷಿಸಲಾಗದಿರುವುದು ನಮ್ಮ ದೌರ್ಬಾಗ್ಯ

ಟಿ ವಿ ರಾಮಚಂದ್ರ ಉವಾಚ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಮಾನವನ ಅಪರಿಮಿತ ಸ್ವಾರ್ಥ ಹಾಗೂ ನಿರಂತರ ಪ್ರಕೃತಿಯ ಶೋಷಣೆ ನಮ್ಮೆಲ್ಲಾ ತೊಂದರೆಗಳಿಗೆ ಮೂಲಕಾರಣ. ಅತಿಸೂಕ್ಷ್ಮ ಜೀವವೈವಿದ್ಯ ಪ್ರದೇಶ ಎಂದು ಗುರುತಿಸಿರುವ ಪಶ್ಚಿಮ ಘಟ್ಟ ಭಾರತದ ಒಟ್ಟು ಭೂಭಾಗದ 2.5 ಶೇಕಡಾದಷ್ಟಿದೆ, ಆದರೆ ಈ ಸಣ್ಣ ಭೂಪ್ರದೇಶವನ್ನೂ ರಕ್ಷಿಸಲು ಸಾಧ್ಯವಾಗದೇ ಇರುವುದು ನಮ್ಮ ವೈಫಲ್ಯ ಎಂದು ಐ ಐ ಎಸ್ ಸಿ ಬೆಂಗಳೂರು ಮುಖ್ಯಸ್ಥ ಟಿ ವಿ ರಾಮಚಂದ್ರ ಹೇಳಿದರು.

ವಿದ್ಯಾಗಿರಿಯಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ- `ಪಶ್ಚಿಮ ಘಟ್ಟದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ’ಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

“ಯುವಜನತೆಯು ಶುದ್ಧ ನೀರು, ಗಾಳಿ, ಪರಿಸರಕ್ಕಾಗಿ ಹೋರಾಡಬೇಕಾಗಿದೆ. ಭೂಮಿತಾಯಿಗೆ ಹಸಿರು ಸೀರೆ ಉಡಿಸುವ ಪ್ರಯತ್ನ ಮಾಡಬೇಕಾಗಿದೆ. ಪರಿಸರ ಸ್ನೇಹಿ ಆರ್ಥಿಕ ವಲಯ ರೂಪಿಸಬೇಕು” ಎಂದರು.

ಶಿರಸಿ ಸೋಂದೆ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಮಾತನಾಡಿ, “ಪರಿಸರ ವಿರೋಧಿ ಚಟುವಟಿಕೆಯನ್ನು ಸರ್ಕಾರ ಸ್ವಾಗತಿಸುವುದು ಖಂಡನೀಯ, ನೇತ್ರಾವತಿ ತಿರುವು ವಿರೋಧಿ ಚಳುವಳಿ ಬಗ್ಗೆ ನಮ್ಮ ಬೆಂಬಲವಿದೆ. ನಗರೀಕರಣ, ಕೈಗಾರೀಕರಣ ದಿಂದಾಗಿ ಕೆರೆ ಒತ್ತುವರಿಯಾಗುತ್ತಿದೆ, ಕೆರೆ ಒತ್ತುವರಿ ವಿರುದ್ಧ ಕಾನೂನು ಇದ್ದರೂ, ಅದು ಕ್ರಿಯಾಶೀಲವಾಗಿರದೇ, ಅತಿಕ್ರಮಿಸಿದವರಿಗೆ ಜಯವಾಗುತ್ತಿದೆ. ಕೆರೆಗಳ ಮೇಲ್ಭಾಗದಲ್ಲಿ ಹಸಿರೀಕರಣ ಹಾಗೂ ನೀರಿಂಗಿಸಿದರೆ ಅಂರ್ತಜಲದ ಮಟ್ಟ ಹೆಚ್ಚಾಗಿ ಪ್ರಕೃತಿಯ ಸಮತೋಲನ ಸಾಧ್ಯ” ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಭೈರಪ್ಪ, “ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ  ಹಾಗೂ ಮಕ್ಕಳಲ್ಲಿ ಜಾಗೃತೆ ಮೂಡಿಸುವಲ್ಲಿ ಸಹಕಾರಿಯಾಗಿವೆ” ಎಂದರು.

“ಪರಿಸರ, ಜೀವ ವೈವಿಧ್ಯ ಹಾಗೂ ಇಂಧನ ಪ್ರಾಕೃತಿಕ ಸಮತೋಲನದ ಮುಖ್ಯ ಅಂಶಗಳು. ಆದರೆ ಇವೇ ಮುಖ್ಯ ಬುನಾದಿಗಳು ಅಳಿವಿನ ಅಂಚಿನಲ್ಲಿವೆ” ಎಂದು ಬೇಸರ ವ್ಯಕ್ತಪಡಿಸಿದರು.

ಮೂಡುಬಿದಿರೆ ಜೈನ ಮಠದ ಸ್ವಸ್ಥಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮಿ “ಕಾಡು, ನಾಗರ ಬನ, ಕೆರೆಗಳ ಅಳಿವು ಉಳಿವುಗಳ ಬಗ್ಗೆ ಚಿಂತನೆ ಆಗಬೇಕಾಗಿದೆ” ಎಂದರು.