ದೇಶದಲ್ಲಿ ಉಲ್ಬಣಿಸುತ್ತಿರುವ ನಿರುದ್ಯೋಗ ಸಮಸ್ಯೆ

ಪ್ರತಿ ತಿಂಗಳೂ ಲಕ್ಷಾಂತರ ಯುವಕರು ದೇಶದ ದುಡಿಯುವ ವರ್ಗಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇವರಿಗೆ ಸರ್ಕಾರಿ ಕ್ಷೇತ್ರದಲ್ಲಾಗಲಿ, ಖಾಸಗಿ ಕ್ಷೇತ್ರದಲ್ಲಾಗಲೀ ನೌಕರಿ ದೊರೆಯುತ್ತಿಲ್ಲ.

  • ಹರ್ಷ ಮಂದೇರ್

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವಂತೆ ಆಗ್ರಹಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.  ಖಾಸಗಿ ಕ್ಷೇತ್ರದಲ್ಲಿ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ನೌಕರಿ ನೀಡುವುದರ ಮೂಲಕ ಅವರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ತಡೆಗಟ್ಟಬಹುದು, ಇದರಿಂದ ಉಲ್ಬಣಿಸುತ್ತಿರುವ ಮಾವೋವಾದಿ ಉಪಟಳವನ್ನೂ ನಿಯಂತ್ರಿಸಬಹುದು ಎಂದು ಪಾಸ್ವಾನ್ ಹೇಳಿದ್ದಾರೆ. ಈ ಅವಕಾಶವಂಚಿತ ಜನಸಮುದಾಯಗಳಿಗೆ ಸೇರಿದ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಈ ಭೂಮಿಯ ಅಡಿಯಲ್ಲಿ ಚಿನ್ನ ಮತ್ತು ಕಲ್ಲಿದ್ದಲು ನಿಕ್ಷೇಪಗಳಿವೆ. ಇದನ್ನು ಲೂಟಿ ಮಾಡಿ ಜನರನ್ನು ಉಚ್ಚಾಟಿಸಿದಾಗ ಸಹಜವಾಗಿಯೇ ಅವಕಾಶವಂಚಿತರು ದಾರಿ ತಪ್ಪುತ್ತಾರೆ ಎಂದು ಪಾಸ್ವಾನ್ ಹೇಳಿದ್ದಾರೆ.

ಪಾಸ್ವಾನ್ ಅವರ ಹೇಳಿಕೆಯ ಹಿಂದಿನ ತರ್ಕ ಏನೇ ಇರಲಿ, ಮಾವೋವಾದ ಕೇವಲ ದೇಶದ ಭದ್ರತೆಯ ಪ್ರಶ್ನೆಯಲ್ಲ, ಸಮಾಜೋ ಆರ್ಥಿಕ ಕಾರಣಗಳೂ ಮಾವೋವಾದವನ್ನು ಪೋಷಿಸುತ್ತವೆ ಎಂದು ಸಚಿವರು ಒಪ್ಪಿಕೊಂಡಂತಿದೆ.  ದಲಿತ ಯುವಕರಿಗೆ ಭವಿಷ್ಯದಲ್ಲಿ ಉದ್ಯೋಗ ದೊರೆಯುವ ಭರವಸೆಯೇ ಇಲ್ಲವಾಗಿರುವುದರಿಂದ ಆಕ್ರೋಶ ಹೆಚ್ಚಾಗಿದೆ ಎಂದು ಪಾಸ್ವಾನ್ ಹೇಳಿರುವುದು ವಾಸ್ತವವೇ ಆಗಿದೆ.

ಆದರೆ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಯುವಕರು ಶಸ್ತ್ರಾಸ್ತ್ರಗಳನ್ನು ಹಿಡಿಯುತ್ತಿರುವುದಕ್ಕೆ ಅನ್ಯ ಕಾರಣಗಳೂ ಇವೆ. ಉಲ್ಬಣಿಸುತ್ತಿರುವ ಕೃಷಿ ಬಿಕ್ಕಟ್ಟು, ಒಣ ಭೂಮಿ ಬೇಸಾಯದಲ್ಲಿ ಕಡಿಮೆ ಬಂಡವಾಳ ಹೂಡಿಕೆ, ರೈತರ ಆದಾಯಕ್ಕೆ ರಕ್ಷಣೆ ಇಲ್ಲದಿರುವುದು,  ಭೂ ಸುಧಾರಣೆಯ ವೈಫಲ್ಯ,  ದುಬಾರಿ ಬೆಲೆಯ ಕೃಷಿ ಉಪಕರಣಗಳು, ಗ್ರಾಮೀಣ ಪ್ರದೇಶಗಳಲ್ಲಿನ ಪರಿಸರ ಹಾನಿ, ಅರಣ್ಯಗಳ ನಾಶ, ಗ್ರಾಮೀಣ ಸಾಲ ಸೌಲಭ್ಯ ಕ್ಷೀಣಿಸಿರುವುದು ಹೀಗೆ ಹತ್ತಾರು ಕಾರಣಗಳಿಂದ ಯುವಕರು ಭ್ರಮನಿರಸನ ಹೊಂದುತ್ತಿದ್ದಾರೆ. ಬುಡಕಟ್ಟು ಪ್ರದೇಶಗಳಲ್ಲಿ ಬೃಹತ್ ಕಾರ್ಪೋರೇಟ್ ಉದ್ದಿಮೆಗಳು ಸಂಪತ್ತಿನ ಬೇಟೆಯಾಡುತ್ತಿರುವುದು ಈ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬೆಳವಣಿಗೆಗಳಿಂದಲೇ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹತಾಶೆ ಮತ್ತು ಅಸಮಾಧಾನದ ಹೊಗೆಯಾಡುತ್ತಿದೆ. ಇದರ ಪರಿಣಾಮವನ್ನು ರೈತರ ಆತ್ಮಹತ್ಯೆಗಳಲ್ಲಿ, ಹಸಿವಿನ ಹಾಹಾಕಾರದಲ್ಲಿ, ಹೆಚ್ಚುತ್ತಿರುವ ವಲಸೆ ಪ್ರಕ್ರಿಯೆಯಲ್ಲಿ, ಪಾಟಿದಾರ್ ಮತ್ತಿತರ ಜಾತಿಗಳ ಮೀಸಲಾತಿ ಆಗ್ರಹದಲ್ಲಿ, ಮಾವೋವಾದಿ ಉಗ್ರವಾದದ ಬೆಳವಣಿಗೆಯಲ್ಲಿ ಕಾಣಬಹುದಾಗಿದೆ.  ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡುವುದರಿಂದ ದಲಿತರು ಮತ್ತು ಆದಿವಾಸಿಗಳನ್ನು ಮಾವೋವಾದದಿಂದ ದೂರ ಇರಿಸಲು ಸಾಧ್ಯವೋ ಇಲ್ಲವೋ ಹೇಳಲಾಗದು . ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಮೀಸಲಾತಿ ಅತ್ಯಗತ್ಯ ಎನ್ನುವುದಂತೂ ಸತ್ಯ.

ಭಾರತದ ಯುವಕರ ಮುಂದೆ ನಿರುದ್ಯೋಗದ ಸಮಸ್ಯೆ ಹಿಮಾಲಯದೆತ್ತರಕ್ಕೆ ಬೆಳೆದಿದೆ. ಪ್ರತಿ ತಿಂಗಳೂ ಲಕ್ಷಾಂತರ ಯುವಕರು ದೇಶದ ದುಡಿಯುವ ವರ್ಗಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇವರಿಗೆ ಸರ್ಕಾರಿ ಕ್ಷೇತ್ರದಲ್ಲಾಗಲಿ, ಖಾಸಗಿ ಕ್ಷೇತ್ರದಲ್ಲಾಗಲೀ ನೌಕರಿ ದೊರೆಯುತ್ತಿಲ್ಲ. ಎನ್ ಸಿ ಸಕ್ಸೇನಾ ಹೇಳುವಂತೆ ದೇಶದಲ್ಲಿ ಒಟ್ಟು ಸರ್ಕಾರಿ ನೌಕರರ ಸಂಖ್ಯೆ, ಸಾರ್ವಜನಿಕ ಕ್ಷೇತ್ರ ಮತ್ತು ರಾಜ್ಯ ಸರ್ಕಾರಗಳೂ ಸೇರಿದಂತೆ, ಒಟ್ಟು ಜನಸಂಖ್ಯೆಯ ಶೇ 1.4ರಷ್ಟಿದೆ. 2001ರಲ್ಲಿ 19.13 ದಶಲಕ್ಷ ಇದ್ದ ಸರ್ಕಾರಿ ನೌಕರರ ಸಂಖ್ಯೆ 2011-12ರಲ್ಲಿ 17.60 ದಶಲಕ್ಷಕ್ಕೆ ಇಳಿದಿದೆ. ಹಾಗಾಗಿಯೇ ದೇಶದೆಲ್ಲೆಡೆ ಶಿಕ್ಷಕರು, ಆರೋಗ್ಯ ಕಾರ್ಮಿಕರು ಮತ್ತು ಮಕ್ಕಳ ಪಾಲಕರ ಕೊರತೆ ಎದ್ದುಕಾಣುತ್ತಿದೆ. ಹಾಗಾಗಿಯೇ ಯುವಕರ ದೃಷ್ಟಿ ಖಾಸಗಿ ಕ್ಷೇತ್ರದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವುದರಿಂದ ಮತ್ತು ಖಾಸಗಿ ಕ್ಷೇತ್ರದಲ್ಲಿ ಸಾಮಾಜಿಕವಾಗಿ ತಾರತಮ್ಯಕ್ಕೊಳಗಾದವರಿಗೆ ಅವಕಾಶಗಳೂ ಕ್ಷೀಣಿಸುತ್ತಿರುವುದರಿಂದ ಮೀಸಲಾತಿ ಅತ್ಯವಶ್ಯ ಎನಿಸುತ್ತದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಔಪಚಾರಿಕ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗದ ಪ್ರಮಾಣ ಕೇವಲ ಶೇ 8 ಮಾತ್ರ. ಇದರಲ್ಲಿ ಅರ್ಧಕ್ಕೂ ಹೆಚ್ಚು ಸರ್ಕಾರಿ ಸಾರ್ವಜನಿಕ ಕ್ಷೇತ್ರದಲ್ಲಿದೆ. ಹಾಗಾಗಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವುದಿಲ್ಲ. ಖಾಸಗಿ ಬಂಡವಾಳ ಹೂಡಿಕೆಯನ್ನು ಆಧರಿಸಿ ರೂಪಿಸಲಾಗುತ್ತಿರುವ ಅಭಿವೃದ್ಧಿಯ ಮಾದರಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗುತ್ತಿರುವುದು ಸ್ಪಷ್ಟ.  2004-10ರ ಅವಧಿಯಲ್ಲಿ ಜಾಗತಿಕ ಅರ್ಥಿಕತೆ ಅದ್ಭುತ ಪ್ರಗತಿ ಕಂಡರೂ ಸೃಷ್ಟಿಯಾದ ಉದ್ಯೋಗ ಕೇವಲ 2.7 ದಶಲಕ್ಷ ಮಾತ್ರ. ಮಿಲಿಯಾಂತರ ಯುವಕರು ಕೃಷಿ ಕ್ಷೇತ್ರದಲ್ಲಿ ಭರವಸೆ ಕಳೆದುಕೊಂಡಿದ್ದಾರೆ. ಶೇ 55ಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳು ಕೃಷಿ ಭೂಮಿ ಇಲ್ಲದೆಯೇ ಬಾಳುತ್ತಿವೆ.  ಸಣ್ಣ ಮತ್ತು ಅತಿ ಸಣ್ಣ ರೈತರ ಬವಣೆ ಹೇಳತೀರದಾಗಿದೆ. 2014ರಲ್ಲಿ ನರೇಂದ್ರ ಮೋದಿ ಒಂದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಆಶಾಕಿರಣ ಮೂಡಿಸಿದ್ದರು  ಆದರೆ ಮೋದಿ ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಭಾರತವನ್ನು ಹಿಂದಕ್ಕೆ ಕೊಂಡೊಯ್ಯುತ್ತಿವೆ. ಈ ಪರಿಸ್ಥಿತಿಯಿಂದ ಹೊರಬರಲು ಕೃಷಿ ಮತ್ತು ಗ್ರಾಮೀಣ ಉದ್ಯೋಗ ಕ್ಷೇತ್ರದಲ್ಲಿ ಬೃಹತ್ ಬಂಡವಾಳ ಹೂಡಿಕೆ ಅತ್ಯಗತ್ಯವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ವಿಸ್ತರಣೆಯ ಮೂಲಕ ಉದ್ಯೋಗ ಸೃಷ್ಟಿಸಬಹುದಾಗಿದೆ. ಆದರೆ ಇದಾವುದೂ ಸಾಕಾರಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ.