2 ವರ್ಷ ಕಳೆದರೂ ಮುಗಿದಿಲ್ಲ ಅಂಡರ್ಪಾಸ್ ಕಾಮಗಾರಿ

ಪಡೀಲಿನಲ್ಲಿ ನಿತ್ಯ ಟ್ರಾಫಿಕ್ ಕಿರಿಕಿರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಡೀಲ್ ರಸ್ತೆ ಕಳೆದೊಂದು ತಿಂಗಳಿನಿಂದ ಟ್ರಾಫಿಕ್ ಜಾಂಗೆ ಕಾರಣವಾಗುತ್ತಿದೆ. ಮುಂಜಾನೆ ಮತ್ತು ಸಂಜೆ ಅವಧಿಯಲ್ಲಿ ಇಲ್ಲಿ ನಿತ್ಯ ಟ್ರಾಫಿಕ್ ಜಾಂ ಉಂಟಾಗುತ್ತಿದ್ದು, ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡು ತುರ್ತು ತೆರಳುವ ಪ್ರಯಾಣಿಕರು ಕಂಗೆಡುತ್ತಿದ್ದಾರೆ.

ಹೆದ್ದಾರಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಪಡೀಲ್ ಬಳಿ ಮಾತ್ರ ಮುಂಚಿನ ಸ್ಥಿತಿಯೇ ಇದೆ. ಇಲ್ಲಿನ ಹಳೇ ರೈಲ್ವೇ ಕೆಳಸೇತುವೆ ಇಲ್ಲಿನ ಟ್ರಾಫಿಕ್ ಜಾಂಗೆ ಕಾರಣವಾಗಿದ್ದು, ಇಲ್ಲಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ. ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗಿದೆ.

ರೈಲ್ವೇ ಹಳಿಯನ್ನು ದ್ವಿಗುಣಗೊಳಿಸುವ ಕಾಮಗಾರಿಯೂ ವಿಳಂಬಗತಿಯಲ್ಲಿ ಸಾಗಿದೆ. ಕಾಮಗಾರಿಯಿಂದಾಗಿ ರಸ್ತೆಯಿಡೀ ಹೊಂಡಗಳಿಂದಲೇ ತುಂಬಿ ಹೋಗಿದ್ದು, ಇದನ್ನು ದುರಸ್ತಿಪಡಿಸಲು ಇಲಾಖೆ ಮುಂದಾಗುತ್ತಿಲ್ಲ. ಮಳೆಗಾಲ ಕೂಡಾ ಆಗಿರುವುದರಿಂದ ಕೆಸರು ನೀರಿನ ಹೊಂಡಗಳು ಗೊತ್ತಾಗದೇ ಬೈಕ್ ಸವಾರರು ಕೈಕಾಲು ಮುರಿದುಕೊಳ್ಳುವಂತಾಗಿದೆ.

“ಪಡೀಲಿನಿಂದ ಎರಡೂ ಕಡೆ ಸುಮಾರು ಎರಡೂವರೆ ಕಿ ಮೀ ದೂರಕ್ಕೆ ಟ್ರಾಫಿಕ್ ಬ್ಲಾಕ್ ಆಗುತ್ತಿದೆ. ನಗರದ ಮಧ್ಯಭಾಗದ ಟ್ರಾಫಿಕ್ ಸಂಚಾರ ಸರಿಪಡಿಸಲು ನಿತ್ಯ ಹೆಣಗಾಡುವ ಪೊಲೀಸರು ಇದೀಗ ಪಡೀಲ್ ಬಳಿ ಕೂಡಾ ನಿತ್ಯ ಟ್ರಾಫಿಕ್ ಸರಿಪಡಿಸಲು ಹೆಣಗಾಡಬೇಕಾಗಿದೆ. ಸುಮಾರು 1 ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಈ ಕಷ್ಟ ಅಂಬುಲೆನ್ಸುಗಳಿಗೂ ತಪ್ಪಿಲ್ಲ. ಈ ಟ್ರಾಫಿಕ್ ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಸಂಪೂರ್ಣ ಹೊಣೆಯಾಗಿದೆ. ಸಮಸ್ಯೆ ಬಿಗಡಾಯಿಸಿದ್ದರೂ ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ತಿ ಪಡಿಸಲು ಮುಂದಾಗುತ್ತಿಲ್ಲ” ಎನ್ನುತ್ತಾರೆ ಸ್ಥಳೀಯ ನಿವಾಸಿ ಮೊಹಮ್ಮದ್.

“ಪುತ್ತೂರಿನಿಂದ ರೋಗಿಯೊಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ಅಂಬುಲೆನ್ಸ್ ಶನಿವಾರ ಸಂಜೆ ಟ್ರಾಫಿಕ್ಕಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಇತರ ವಾಹನಗಳ ಚಾಲಕರು ಅದ್ಹೇಗೋ ಅದನ್ನು ಸಾಗಲು ಅನುವು ಮಾಡಿಕೊಟ್ಟರು. ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಕೋರಿ ನಾವು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಇನ್ನೊಂದು ವಾರದೊಳಗೆ ಇಲ್ಲಿನ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ನಾವು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ” ಎನ್ನುತ್ತಾರೆ ಕಣ್ಣೂರು ನಿವಾಸಿ ಹರೀಶ್.