ಬಪ್ಪನಾಡು ಸಹಿತ ಅನೇಕ ಕಡೆ ಒಳಚರಂಡಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ವರ್ಷಗಳ ಹಿಂದೆ ಕಾಂಕ್ರೀಟೀಕರಣಗೊಂಡು ಸೂಕ್ತ ಚರಂಡಿ ಇಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಪ್ಪನಾಡು-ವಿಜಯಾ ಕಾಲೇಜು-ಏಳಿಂಜೆ ಲೋಕೋಪಯೋಗಿ ರಸ್ತೆ ದುರಸ್ತಿಗೆ ಚಾಲನೆ ದೊರೆತಿದೆ.

ಸುಮಾರು ಒಂದು ಕೋಟಿ ರೂ ನಗರೋತ್ಥಾನ ಯೋಜನೆಯಡಿ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ 5 ಕಡೆಗಳಲ್ಲಿ ಚರಂಡಿ ನಿರ್ಮಿಸಲು ಮಾಜಿ ಸಚಿವ ಅಭಯಚಂದ್ರ ಜೈನ್ ಶಿಲಾನ್ಯಾಸ ನೆರವೇರಿಸಿದರು. ಮುಲ್ಕಿ ನಗರ ಪಂಚಾಯತಿ ವ್ಯಾಪ್ತಿಯ ಬಪ್ಪನಾಡು, ಚಿತ್ರಾಪು, ಮರ್ಕಂಜ, ಕೆ ಎಸ್ ರಾವ್ ನಗರ ಹಾಗೂ ವಿಜಾಪುರ ಕಾಲೊನಿಯ ಹಿಂದುಳಿದ ಪ್ರದೇಶಗಳಲ್ಲಿ ಚರಂಡಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಹೇಳಿದರು.

ಮಾತಿನ ಚಕಮಕಿ

ಮಾಜಿ ಸಚಿವ ಅಭಯಚಂದ್ರ ಹಾಗೂ ಮುಲ್ಕಿ ನ ಪಂ ಅಧ್ಯಕ್ಷ ಸುನಿಲ್ ಆಳ್ವ ನೇತೃತ್ವದಲ್ಲಿ ಹಿಂದುಳಿದ ಪ್ರದೇಶವಾದ ಕೆ ಎಸ್ ರಾವ್ ನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಭೇಟಿ ನೀಡಿದಾಗ ಸ್ಥಳೀಯ ಪಂಚಾಯತಿ ಸದಸ್ಯ ಹಾಗೂ ಅಭಯಚಂದ್ರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೆಲ ದಿನಗಳ ಹಿಂದೆ ಬಿಜೆಪಿ ತನ್ನ ಪಕ್ಷದ ಸ್ಲಂ ಮೋರ್ಚಾದ ಅಧ್ಯಕ್ಷರೊಬ್ಬರನ್ನು ಕೆ ಎಸ್ ರಾವ್ ನಗರಕ್ಕೆ ಕರೆಸಿ ಕ್ಷುಲ್ಲಕ ರಾಜಕಾರಣ ನಡೆಸುತ್ತಿದೆ ಎಂಬ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಕೆಲ ವರ್ಷಗಳ ಹಿಂದೆ ಬಪ್ಪನಾಡು-ಏಳಿಂಜ ಲೋಕೋಪಯೋಗಿ ರಸ್ತೆಯ ಕಾಮಗಾರಿಯಲ್ಲಿ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿಯಿಂದ ವಿಜಯಾ ಕಾಲೇಜಿನವರೆಗೆ ರಸ್ತೆ ಕಾಂಕ್ರೀಟೀಕರಗೊಂಡಿದ್ದರಿಂದ ರಸ್ತೆ ಬದಿಯಲ್ಲಿ ಸೂಕ್ತ ಚರಂಡಿಗಳು ನಿರ್ಮಿಸದೆ ಅನೇಕ ಸಣ್ಣ ಪುಟ್ಟ ಅಪಘಾತಗಳು ನಡೆದಿದ್ದರ ಬಗ್ಗೆ `ಕರಾವಳಿ ಅಲೆ’ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.