ಮಂಗಳೂರು ಜೈಲ್ನಲ್ಲಿ ಕೈದಿ ಆತ್ಮಹತ್ಯೆಗೆ ಯತ್ನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಅಧಿಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಗೊಂಡಿರುವ ತಿರುವನಂತಪುರದ ಬಿಜು ಯಾನೆ ಜೋಸ್ (31)ನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲು ನಿಲ್ದಾಣದಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಆರ್‍ಪಿಎಫ್ ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಈತ ಕಳೆದ ಎರಡು ವರ್ಷಗಳಿಂದ ರೋಗದಿಂದ ಬಳಲುತ್ತಿದ್ದಾನೆ. ತಾನು ಅಧಿಕ ಮಾತ್ರೆ ಸೇವಿಸಿದ್ದೇನೆ, ಆತ್ಮಹತ್ಯೆಗೆ ಯತ್ನಿಸುತ್ತಿದ್ದೇನೆ ಎಂದು ಜೈಲು ಸಿಬ್ಬಂದಿಯಲ್ಲೇ ಹೇಳಿಕೊಂಡಿದ್ದು, ಈತನ ವರ್ತನೆಯನ್ನು ಕಂಡ ಸಿಬ್ಬಂದಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.