ಜೈಲಲ್ಲಿ ಕೈದಿಗೆ ತಂಡದಿಂದ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬನಿಗೆ ಪಕ್ಕದ ಸೆಲ್ಲಿನಲ್ಲಿದ್ದ ಮೂರ್ನಾಲ್ಕು ಮಂದಿ ಕೈದಿಗಳು ಸೇರಿ ಚೊಂಬಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪಣಂಬೂರು ಠಾಣೆಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಮೂರು ದಿನಗಳ ಹಿಂದೆ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ನಿಜಾಮುದ್ದೀನ್ ಎಂಬಾತನನ್ನು ಬಂಧಿಸಿದ್ದರು. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈತ ಜಿಲ್ಲಾ ಕಾರಾಗೃಹದಲ್ಲಿ ಬಂಧಿತನಾಗಿದ್ದ ಸಂದರ್ಭದಲ್ಲಿ ಬಿ ಬ್ಲಾಕ್ ನಾಲ್ಕನೇ ಸೆಲ್ಲಿನಲ್ಲಿದ್ದ ಪಚ್ಚು ಎಂಬಾತನು ವಿನಾಕಾರಣ ಜಗಳಕ್ಕೆ ನಿಂತಿದ್ದನೆನ್ನಲಾಗಿದೆ.

ಅಲ್ಲದೆ ಪಚ್ಚುವಿನ ಜೊತೆಗೆ ಇನ್ನಿಬ್ಬರು ಸೇರಿಕೊಂಡು “ನೀನು ಯಾವ ಪ್ರಕರಣದಲ್ಲಿ ಒಳಗೆ ಬಂದಿದ್ದಿ” ಎಂದು ಪ್ರಶ್ನಿಸಿದ್ದರು. “ನಾನು ವಾರಂಟಿನಲ್ಲಿ ಬಂದಿದ್ದೇನೆ” ಎಂದು ಹೇಳಿದಾಗ, ಪಚ್ಚು ಅವಾಚ್ಯವಾಗಿ ಬೈದು ಚೊಂಬಿನಿಂದ ಮುಖಕ್ಕೆ ಹೊಡೆದಿದ್ದಾನೆನ್ನಲಾಗಿದೆ. ಆತನಿಗೆ ಇತರರು ಸಾಥ್ ನೀಡಿದ್ದಾರೆನ್ನಲಾಗಿದೆ. ಬರ್ಕೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.