ಅನ್ಯರ ಹೆಸರಿನಲ್ಲಿ ಸಿಮ್ ದುರ್ಬಳಕೆ

ಮಂಗಳೂರು : ನಕಲಿ ನಂಬ್ರದ ಮೂಲಕ ಫೋನ್ ಕರೆ ಮಾಡಿ ಸಿಕ್ಕಿಬಿದ್ದಿರುವ ವಿಚಾರಣಾಧೀನ ಕೈದಿಯೊಬ್ಬನ ವಿರುದ್ಧ ಪಾಂಡೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿ ಸಾಜೀದನನ್ನು ಬಂಧಿಸಿ ಸೆರೆಮನೆಗೆ ತಳ್ಳಿದ್ದರು. ಈ ವೇಳೆ ಸಬ್‍ಜೈಲಿನಲ್ಲಿ ಬಂಧಿಯಾಗಿದ್ದ ಸಾಜೀದ್ ತನ್ನ ಬಳಿ ಇದ್ದ ಮೊಬೈಲ್‍ನಿಂದ ಅನ್ಯರಿಗೆ ಕರೆ ಮಾಡಿದ್ದು, ಈತನು ಕರೆ ಮಾಡಿದ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಅದರ ಸಿಮ್ ಬೇರೆಯವರ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ. ಆರೋಪಿ ಸಾಜೀದ್ ತನ್ನ ಬಳಿ ಇದ್ದ ಮೊಬೈಲ್ ನಂಬ್ರವನ್ನು ನೀಡದೇ, ಪೊಲೀಸರ ವಿಚಾರಣೆ ವೇಳೆಯಲ್ಲೂ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸಿದ್ದಾನೆ. ಆರೋಪಿ ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.