ಹೊನ್ನಾವರ ಅಘೋಷಿತ ಬಂದ್

ಗುಂಪು ಘರ್ಷಣೆ ಹಿನ್ನೆಲೆ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಟೇಂಪೋ-ರಿಕ್ಷಾ ಸ್ಟ್ಯಾಂಡ್ ಬಳಿ ಬುಧವಾರ ತಡರಾತ್ರಿ ದುಷ್ಕರ್ಮಿಗಳಿಂದ ನಡೆದ ಗಲಭೆಯ ಪರಿಣಾಮ ಗುರುವಾರ ಜನಜೀವನ ಅಸ್ಥವ್ಯಸ್ಥಗೊಂಡಿತು.

ಈ ಕಹಿ ಘಟನೆಯಿಂದ ಭಯದ ವಾತಾವರಣ ಉಂಟಾಗಿ ಪಟ್ಟಣದಲ್ಲಿ ಅಘೋಷಿತ ಬಂದ್ ಆಗಿದ್ದವು. ಮೆಡಿಕಲ್ ಶಾಪ್ ಹೊರತುಪಡಿಸಿ ಯಾವುದೇ ಅಂಗಡಿಗಳ ಬಾಗಿಲು ತೆರೆಯಲಿಲ್ಲ. ಎರಡು ಕೋಮಿನ ಒಟ್ಟೂ 43 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲ ತಿಳಿಸಿದೆ. ಗುರುವಾರ ಸಂಜೆಯ ವೇಳೆ ಕೆಲವರನ್ನು ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ.

ಪಟ್ಟಣದ ಶರಾವತಿ ಸರ್ಕಲ್ ಸಮೀಪ ರಿಕ್ಷಾ ಮತ್ತು ಬೈಕ್ ನಡುವೆ ಪರಸ್ಪರ ಡಿಕ್ಕಿಯಾದ ಪರಿಣಾಮ ಭಿನ್ನಕೋಮಿನ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇದೇ ವಿಚಾರವಾಗಿ ಬಸ್ ನಿಲ್ದಾಣದ ಸಮೀಪದಲ್ಲಿ ಮತ್ತೆ ಗಲಾಟೆ ನಡೆದಿತ್ತು. ಇದು ಕೋಮುಸಂಘರ್ಷವಾಗಿ ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಮಾತಿಗೆ ಮಾತು ಬೆಳೆದು ಹಠಾತ್ ಆಗಮಿಸಿದ ಹಲವಾರು ಜನರು ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ಎಸೆದ ಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಹೊನ್ನಾವರದ ನರಸಿಂಹ ಮೇಸ್ತ ಮತ್ತು ಶರತ್ ಮಹಾಲೆ ಎಂಬ ಇಬ್ಬರು ತೀವ್ರ ಗಾಯಗೊಂಡುಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಪೊಲೀಸ್ ಪೇದೆಯ ಕೈಗೆ ಗಾಯವಾಗಿತ್ತು.

ಪೊಲೀಸರ ಆರ್ಭಟ ಘಟನೆಗೆ ಸಂಬಂಧಿಸಿ ಪಟ್ಟಣ ಸಂಪೂರ್ಣ ಪೊಲೀಸ್ ಸರ್ಪಗಾವಲಿನಲ್ಲಿತ್ತು. ತಡರಾತ್ರಿಯಾದ ಗುಂಪು ಘರ್ಷಣೆ ಹಳ್ಳಿಗರಿಗೆ ಸರಿಯಾಗಿ ತಿಳಿಯದೇ ಬೆಳಿಗ್ಗೆ ಪಟ್ಟಣಕ್ಕೆ ಬಂದ ವ್ಯಾಪಾರಸ್ಥರು, ಪ್ರಯಾಣಿಕರು ಪಟ್ಟಣದ ವಿವಿಧ ಭಾಗಗಳಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಜನರನ್ನು ಚದುರಿಸುತ್ತಿದ್ದ ಪೊಲೀಸರು ಪ್ರಯಾಣಿಕರನ್ನು ಲಾಠಿಯಿಂದ ಗದರಿಸಿ ದಿಕ್ಕು ತೋಚದಂತೆ ಮಾಡಿದರು. ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಕುತೂಹಲದಿಂದ ನಿಂತಿದ್ದ ಜನರನ್ನು ಪೊಲೀಸರು ಲಾಠಿ ತೋರಿಸಿ ಚದುರಿಸಿದರು. ಪಟ್ಟಣದಲ್ಲಿ ನಡೆದ ಘಟನೆಯ ಪರಿಣಾಮವಾಗಿ ತಾಲೂಕಿನ ಕರ್ಕಿ ಮತ್ತು ಹಳದೀಪುರದಲ್ಲಿ ಗಲಾಟೆ ನಡೆದವು. ಕೂಡಲೇ ಪೊಲೀಸರು ಅಲ್ಲಿಗೆ ತೆರಳಿ ಗುಂಪುಗಳನ್ನು ಚದುರಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಹರಸಾಹಸಪಟ್ಟರು.

ಶಾಲಾ-ಕಾಲೇಜು ಬಂದ್ ಪಟ್ಟಣದಲ್ಲಿ ಎಂದಿನಂತೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬಂದಿದ್ದರು. ಅಹಿತಕರ ಘಟನೆ ನಡೆಯುವುದೆಂಬ ಆತಂಕದಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಆತಂಕದ ವಾತಾವರಣ ಇರುವುದರಿಂದ ಸಾರ್ವಜನಿಕಕರು ಹಳ್ಳಿಗಳಿಂದ ಪಟ್ಟಣಕ್ಕೆ ಬರದೇ ಕಚೇರಿಗಳ ಆವರಣ ಬಿಕೋ ಎನ್ನುತ್ತಿತ್ತು. ಆದರೆ ಅಂಗಡಿ, ಹೋಟೆಲುಗಳು ಬಂದ್ ಇದ್ದರಿಂದ ಕುಡಿಯುವ ನೀರಿಗೂ ಜನರು ಪರದಾಡುವಂತಾಯಿತು.

LEAVE A REPLY