ದೂರು ಕೊಡಿ `ಸ್ವಚ್ಛತಾ’ ಮೊಬೈಲ್ ಆ್ಯಪಿಗೆ

ನಿಮ್ಮ ವಾರ್ಡ್ ಕ್ಲೀನ್ ಇಲ್ಲವೇ ?

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಪಾಲಿಕೆಗಳಿಗೆ ಇತ್ತೀಚಿನ ದಿನಗಳಲ್ಲಿ ನೈರ್ಮಲ್ಯ ನಿರ್ವಹಣೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಇದನ್ನು ಬಗೆಹರಿಸಲೆಂದೇ ಇದೀಗ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯವು ಹೊಸದೊಂದು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಮಾಹಿತಿ ತಂತ್ರಜ್ಞಾನದ ನೆರವನ್ನು ಪಡೆದುಕೊಂಡು ಸ್ವಚ್ಛತೆಯನ್ನು ಕಾಪಾಡಲೆಂದೇ ನೂತನ ಆ್ಯಪ್ ಬಿಡುಗಡೆ ಮಾಡಿದೆ. ಇದರ ಹೆಸರು `ಸ್ವಚ್ಛತಾ’ ಮೊಬೈಲ್ ಆ್ಯಪ್.

ಸ್ವಚ್ಛತೆಗೆ ಸಂಬಂಧಿಸಿದ ಸಾರ್ವಜನಿಕರ ದೂರು ದುಮ್ಮಾನಗಳನ್ನು ಈ ಆ್ಯಪಿಗೆ ನೀಡಿದಲ್ಲಿ, ಪಾಲಿಕೆಗೆ ಸಂಬಂಧಿಸಿದ ಸಿಬ್ಬಂದಿ ಬಂದು ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಈಗಾಗಲೇ ಈ ಆ್ಯಪನ್ನು ಪ್ರಾಯೋಗಿಕ ನೆಲೆಯಲ್ಲಿ ಕಳೆದ ಐದು ದಿನಗಳಿಂದ ನಿರ್ವಹಣೆ ಮಾಡುತ್ತಿದೆ. ಮುಂದಿನ ವಾರಾಂತ್ಯದೊಳಗೆ ಈ ಆ್ಯಪ್ ಕಾರ್ಯನಿರ್ವಹಣೆ ಆರಂಭಿಸಲಿದೆ ಎಂದು ಮಂಗಳೂರು ನಗರ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಸ್ವಚ್ಛತೆಗೆ ಸಂಬಂಧಿಸಿದಂತೆ ನೀವು ಈ ಆ್ಯಪ್ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಪ್ಲೇಸ್ಟೋರ್ ಮೂಲಕ ಈ ಆ್ಯಪನ್ನು ನೀವು ಮೊದಲಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿ ಸೂಚಿತ ನಿಯಮದಂತೆ ವಿಚಾರಗಳನ್ನು ಅಪ್ಲೋಡ್ ಮಾಡಬೇಕು.

ಕಸ ಗುಡಿಸಿಲ್ಲ, ತ್ಯಾಜ್ಯ ವಾಹನ ಬಂದಿಲ್ಲ, ಕಸದ ತೊಟ್ಟಿ ಕ್ಲೀನ್ ಮಾಡಿಲ್ಲ, ತ್ಯಾಜ್ಯದ ರಾಶಿ, ಸಾರ್ವಜನಿಕ ಶೌಚಾಲಯ ಬ್ಲಾಕ್, ಸಾರ್ವಜನಿಕ ಶೌಚಾಲಯದಲ್ಲಿ ವಿದ್ಯುತ್ ಇಲ್ಲ, ನೀರಿಲ್ಲ, ಸ್ವಚ್ಛತೆಯನ್ನು ನಿರ್ವಹಿಸಿಲ್ಲ, ಸತ್ತು ಬಿದ್ದಿರುವ ಪ್ರಾಣಿಗಳ ಕಳೇಬರ ಕೊಂಡುಹೋಗಿಲ್ಲ ಇತ್ಯಾದಿ ದೂರುಗಳ ಬಗ್ಗೆ ಈ ಆ್ಯಪಿನಲ್ಲಿ ಸಾರ್ವಜನಿಕರು ಮುಂಚಿತವಾಗಿ ದೂರು ನೀಡಬಹುದಾಗಿದೆ.

ಉದಾಹರಣೆಗೆ ನಿಮ್ಮ ವಾರ್ಡಿನಲ್ಲಿ ಕಸಗುಡಿಸಿಲ್ಲವೆಂದಾದರೆ ಕೂಡಲೇ ನೀವು ಆ ಪ್ರದೇಶದ ಫೋಟೋವನ್ನು ತೆಗೆದು ಸಂಪೂರ್ಣ ಮಾಹಿತಿಯೊಂದಿಗೆ ಈ ಆ್ಯಪಿಗೆ ಫೋಟೋವನ್ನು ಅಪ್ಲೋಡ್ ಮಾಡಿದರೆ ಅದು ಸಂಬಂಧಿತ ಇಲಾಖೆಗೆ ಮಾಹಿತಿ ರವಾನಿಸಿ ನಿಮ್ಮ ವಾರ್ಡಿನಲ್ಲಿ ಸ್ವಚ್ಛತೆ ಕ್ರಮ ಕೈಗೊಳ್ಳುತ್ತದೆ.