ಸತ್ತ 7 ತಿಂಗಳ ಮಗು ಶವ ಸೈಕಲಲ್ಲಿ ಸಾಗಿಸಿದ ಚಿಕ್ಕಪ್ಪ

ಕೌಸಂಬಿ : ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಫಲಗೊಂಡು ಮೃತಪಟ್ಟ ಏಳು ತಿಂಗಳ ಹೆಣ್ಣು ಮಗುವಿನ ಶವವನ್ನು ಮನೆಗೆ ಸಾಗಿಸಲು ಅಂಬುಲೆನ್ಸ್ ಒದಗಿಸುವಂತೆ ಮನವಿ ಮಾಡಿದರೂ ಅಲ್ಲಿನ ವೈದ್ಯರು ನಿರಾಕರಿಸಿದ್ದರಿಂದ ಶವವನ್ನು ಆಕೆಯ ಚಿಕ್ಕಪ್ಪ ಸೈಕಲಿನಲ್ಲೇ ಸಾಗಿಸಿದ ಕರುಣಾಜನಕ ಘಟನೆ ವರದಿಯಾಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಮತ್ತು ಅಂಬುಲೆನ್ಸ್ ಚಾಲಕನ ವಿರುದ್ಧ ಅಧಿಕಾರಿಗಳು ಎಫ್ ಐ ಆರ್ ದಾಖಲಿಸಿದ್ದಾರೆ. ಇದೇ ವೇಳೆ ಆಸ್ಪತ್ರೆಯೂ ಈ ಘಟನೆಯ ವಿಸ್ತøತ ತನಿಖೆ ನಡೆಸುತ್ತಿದೆ.

ಮಜ್ಹಾನ್ಪುರ ತೆಹಶೀಲಿನ ಮಲಕ್ ಸದ್ದಿ ಗ್ರಾಮದ ಕೂಲಿ ಕಾರ್ಮಿಕ ಅನಂತಕುಮಾರನ ಪುತ್ರಿ ಪೂನಂ (7 ತಿಂಗಳು) ವಾಂತಿ ಮತ್ತು ಬೇಧಿಯ ನಿಮಿತ್ತ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆ ವೆಚ್ಚಕ್ಕೆ ಹಣ ಸಂಗ್ರಹಿಸುವ ದೆಸೆಯಲ್ಲಿ ತಂದೆ ಕುಮಾರ್ ಅಲಹಾಬಾದಿಗೆ ತೆರಳಿದ ಹೊತ್ತಿಗೆ ಚಿಕ್ಕಪ್ಪ ಬ್ರಿಜ್ಮೋಹನ್ ಆಸ್ಪತ್ರೆಯಲ್ಲಿ ಮಗುವಿನ ಆರೈಕೆ ನೋಡಿಕೊಳ್ಳುತ್ತಿದ್ದ. ಆದರೆ ಆಕೆ ಸೋಮವಾರ ಮೃತಪಟ್ಟಿದ್ದಾಳೆ.