ನಂದಿಕೂರಲ್ಲಿ ಅಕ್ರಮ ಬಂಡೆ ಸ್ಫೋಟ

ಸ್ಥಳೀಯರಲ್ಲಿ ಆತಂಕ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಕಳೆದ ಒಂದು ವಾರದಿಂದ ಅಕ್ರಮವಾಗಿ ಬಂಡೆಕಲ್ಲು ಸ್ಫೋಟ ಮಾಡುತ್ತಿದ್ದು, ಸ್ಥಳೀಯ ಮನೆಗಳ ಗೋಡೆಗಳು ಬಿರುಕು ಬಿಟ್ಟಿದಲ್ಲದೆ ಸ್ಫೋಟದ ಸಂದರ್ಭ ಬಂಡೆ ತುಂಡುಗಳು ಎಲ್ಲೆಂದರಲ್ಲಿ ಹಾರುವುದರಿಂದ ಈ ಭಾಗದ ನಿವಾಸಿಗಳು ಆಂತಕ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ಈ ಸ್ಫೋಟಗಳು ರಾತ್ರಿ ಹಗಲೆನ್ನದೆ ನಿರಂತರವಾಗಿ ನಡೆಯುತ್ತಿದ್ದು, ಸ್ಫೋಟದ ಸಂದರ್ಭ ಹತ್ತಿರದಲ್ಲೇ ಇರುವ ಮನೆಗಳು ನಡುಗುತ್ತಿದ್ದು ಮಲಗಿದ ಮಕ್ಕಳು ಎಚ್ಚರಗೊಂಡು ಕೂಗಾಡುವಂತಾಗಿದ್ದು, ಈ ಬಗ್ಗೆ ಸ್ಫೋಟ ನಡೆಯುವ ಸ್ಥಳಕ್ಕೆ ಬಂದು ಹೇಳಿದರೆ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಹೊತ್ತಲ್ಲದ ಹೋತ್ತಲ್ಲಿ ನಡೆಯುವ ಸ್ಫೋಟದಿಂದ ಹಾರುವ ಕಲ್ಲುಗಳು ಮನೆ ಸಮೀಪ ಆಟವಾಡುವ ಮಕ್ಕಳ ಹತ್ತಿರಕ್ಕೂ ಬಂದು ಬೀಳುತ್ತಿದ್ದು, ಇದರಿಂದ ಮಕ್ಕಳನ್ನು ಮನೆಯಿಂದ ಹೊರ ಬಿಡುವುದಕ್ಕೂ ನಾವು ಹೆದರುವಂತಾಗಿದೆ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.

ವಾರದಿಂದ ಪ್ರಾಣವನ್ನು ಕೈಯಲ್ಲಿ ಇಟ್ಟುಕೊಂಡು ಈ ಪ್ರದೇಶದಲ್ಲಿ ಅನಿರ್ವಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಹೊತ್ತಲ್ಲದ ಹೊತ್ತಲ್ಲಿ ನಡೆಯುವ ಈ ಸ್ಫೋಟದಿಂದ ನೆಲ ನಡುಗುತ್ತಿದ್ದು, ನಮ್ಮ ಮನೆ ಬೀಳುವಂತ್ತಾಗುತ್ತಿದೆ. ಬಡಪಾಯಿಗಳಾದ ನಾವು ಈ ಸಂಕಷ್ಟದಲ್ಲಿದ್ದರೂ ಈ ಭಾಗದ ಜನಪ್ರತಿನಿಧಿಗಳಾಗಲೀ, ಸರ್ಕಾರಿ ಅಧಿಕಾರಿಗಳಾಗಲೀ ಹತ್ತಿರ ಸುಳಿದಿಲ್ಲ ಎನ್ನುತ್ತಾರೆ ವಯೋವೃದ್ಧೆ ಮಹಿಳೆ.

ಗಮನಕ್ಕೆ ಬಂದಿಲ್ಲ

“ಸ್ಫೋಟ ನಡೆಸುವ ಬಗ್ಗೆ ನಮ್ಮಿಂದ ಯಾವುದೇ ಪರವಾನಿಗೆ ಪಡೆದಿಲ್ಲ, ಅಕ್ರಮವಾಗಿ ನಡೆಯುತ್ತಿರುವ ಈ ಸ್ಫೋಟದ ಬಗ್ಗೆ ಮಾಹಿತಿ ಪಡೆಯಲು ಆರ್ ಐ ಹಾಗೂ ಸ್ಥಳೀಯ ಪಲಿಮಾರು ಗ್ರಾ ಪಂ ವಿಎ ಸ್ಥಳಕ್ಕೆ ಆಗಮಿಸಲು ಸೂಚಿಸಿದ್ದೇನೆ” ಎಂಬುದಾಗಿ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ತಿಳಿಸಿದರಾದರೂ, ಆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಈ ಭಾಗದ ಸಂತ್ರಸ್ತರನ್ನು ತಡರಾತ್ರಿಯವರೆಗೂ ಸ್ಥಳದಲ್ಲಿ ಕಾಯಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ

ಈ ಬಗ್ಗೆ ಕೆಐಡಿಬಿ ಅಧಿಕಾರಿ ಸಿದ್ದರಾಮಯ್ಯಪ್ಪರನ್ನು ಸಂಪರ್ಕಿಸಿದಾಗ, “ಬಂಡೆ ಸ್ಫೋಟ ನಡೆಸುವ ಬಗ್ಗೆ ನಮ್ಮ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ, ಬಂಡೆ ಸ್ಫೋಟಿಸುವುದಿದ್ದರೂ ಜಿಲ್ಲಾಡಳಿತದಿಂದ ಪರವಾನಿಗೆ ಪಡೆಯತಕ್ಕದ್ದು, ಅದೂ ಕೂಡಾ ಜನನಿಬಿಡ ಪ್ರದೇಶದಲ್ಲಿ ಸ್ಫೋಟಕ್ಕೆ ಅವಕಾಶವಿಲ್ಲ. ರಾತ್ರಿಯೂ ಸ್ಫೋಟ ನಡೆಸಿದ್ದಾರೆಂದಾದರೆ ಅದು ಮಹಾಪರಾಧ. ಈ ಬಗ್ಗೆ ನಮ್ಮ ಇಲಾಖೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತದೆ” ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಬಂಡೆ ಸ್ಫೋಟದಿಂದ ಸ್ಥಳೀಯ ನಿವಾಸಿಗಳು ಆತಂಕ ಪಡುವಂತಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.