ಜನರ ಪ್ರಶ್ನೆಗುತ್ತರಿಸಲಾಗದೆ ಸಭೆಯಿಂದ ಕಾಲ್ಕಿತ್ತ ಕನ್ಯಾನ ಗ್ರಾ ಪಂ ಉಪಾಧ್ಯಕ್ಷ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಚಡಪಡಿಸುತ್ತಿದ್ದ ಪಂ ಉಪಾಧ್ಯಕ್ಷರು ಗ್ರಾಮ ಸಭೆ ಮುಗಿಯುವ ಮುನ್ನವೇ ಕಾಲ್ಕಿತ್ತ ಘಟನೆ ಕನ್ಯಾನದಲ್ಲಿ ನಡೆದಿದೆ.

ಮಂಗಳವಾರ ಕನ್ಯಾನ ಗ್ರಾ ಪಂ.ನ ದ್ವಿತೀಯ ಸುತ್ತಿನ ಗ್ರಾಮ ಸಭೆ ಆರಂಭವಾದ ಕೆಲಹೊತ್ತಿನಲ್ಲೇ ಪಂ ಆಡಳಿತದಲ್ಲಿನ

ವೈಫಲ್ಯದ ವಿರುದ್ಧ ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದಿದ್ದರು. ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಬಾಳೆಕೋಡಿ ಕ್ಷೇತ್ರದ ಸಮೀಪ ಮದ್ಯದಂಗಡಿ, ಕನ್ಯಾನ ಪೇಟೆಯಲ್ಲೇ ಕೋಳಿ ಫಾರಂ, 94ಸಿ ಅರ್ಜಿಗಳ ವಿಲೇವಾರಿಯಲ್ಲಿ ಮೀನಮೇಷ, ಕಾಟಾಚಾರದ ವಾರ್ಡ್ ಸಭೆ, ಗ್ರಾಮಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಗ್ರಾಮಸ್ಥರು ಹರಿಸುತ್ತಿದ್ದ ಪ್ರಶ್ನೆಗಳ ಸುರಿಮಳೆಯಿಂದ ತತ್ತರಿಸಿದ ಪಂ ಉಪಾಧ್ಯಕ್ಷ ಅಂದುಮ್ಮ ಯಾನೆ ಅಬ್ದುಲ್ ರಹಿಮಾನ್ ಆರಂಭದಲ್ಲೇ ಚಡಪಡಿಸುತ್ತಾ ಹಾರಿಕೆಯ ಉತ್ತರ ನೀಡುತ್ತಿದ್ದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು ಉಡಾಫೆಯಿಂದ ಹಾರಿಕೆ ಉತ್ತರ ನೀಡುತ್ತಿದ್ದ ಅಂದುಮ್ಮರನ್ನು ಸಮರ್ಪಕ ಉತ್ತರ ನೀಡುವಂತೆ ಒತ್ತಾಯಿಸಿದರು.

ಅಂತೂ ಇಂತೂ ಮಿತಿಮಿರಿದ ವೇಗದಲ್ಲಿ ನಡೆದಿದ್ದ ಗ್ರಾಮಸಭೆಯ ಕೊನೆಯ ಹಂತದಲ್ಲಿ ರಾಷ್ಟ್ರಗೀತೆ ಹಾಡುವ ಮುನ್ನವೇ ಉಪಾಧ್ಯಕ್ಷ ಅಂದಮ್ಮಾ ಸಭೆಯಿಂದ ಕಾಲ್ಕಿತ್ತರು. ಸಭೆ ಮುಗಿಯುವ ಮುನ್ನವೇ ಹೊರನಡೆದು ಜನಪ್ರತಿನಿಧಿ ಅಗೌರವ ತೋರಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು, ಮುಂದಿನ ಗ್ರಾಮಸಭೆ ನಡೆಯುವ ಮುನ್ನವೇ ಉಪಾಧ್ಯಕ್ಷರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.