ಬಾರ್ಯ ಗ್ರಾ ಪಂ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಅವ್ಯಾಹತ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬಾರ್ಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇಲ್ಲಿ ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ಒಡೆಯುವುದರಿಂದ ಅಪಾಯವುಂಟಾಗುವ ಸಂಭವವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾ ಪಂ.ನ ಸರಳೀಕಟ್ಟೆಯ ವ್ಯಾಪ್ತಿಯ ಗೋವಿಂದರಗುಳಿ ಎಂಬಲ್ಲಿ ಖಾಸಗಿ ವ್ಯಕ್ತಿಯೋಬ್ಬನಿಗೆ  ಸೇರಿದ ಜಾಗದಲ್ಲಿ 2 ತಿಂಗಳಿನಿಂದ ಅಕ್ರಮವಾಗಿ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸ್ಫೋಟಕ ಬಳಸಲು ಕೂಡಾ ಇಲ್ಲಿ ಅನುಮತಿ ಪಡೆದಿಲ್ಲ. ಆದರೂ ಇಲ್ಲಿ ರಾತ್ರಿ ಹಗಲೆನ್ನದೇ ಸ್ಫೋಟಕ ಬಳಸಿ ಕಲ್ಲುಗಳನ್ನು ಒಡೆಯಲಾಗುತ್ತಿದೆ. ಇದರಿಂದ ಪರಿಸರದ ಒಂದೆರಡು ಮನೆಗಳಿಗೂ ಹಾನಿಯಾಗಿದ್ದು, ಅಪಾಯದ ನಡುವೆಯೇ ಬದುಕುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ತಣ್ಣೀರುಪಂಥ, ಬಾರ್ಯ ಗ್ರಾ ಪಂ ವ್ಯಾಪ್ತಿಯಲ್ಲಿ ಗ್ರಾನೈಟ್ ಕಲ್ಲುಬಂಡೆಗಳ ಸಂಖ್ಯೆ ಹೇರಳವಾಗಿದ್ದು, ಈ ಭಾಗದಲ್ಲಿ ಹೆಚ್ಚಿನ ಕಡೆ ಭೂಗರ್ಭದ ಒಳಗೆ ಬಂಡೆಗಳೇ ಹರಡಿಕೊಂಡಿವೆ. ಅಂಥದ್ದೇ ಜಾಗ ಇದಾಗಿದ್ದು, ಕೆಲವು ವರ್ಷಗಳ ಹಿಂದೆ ಬೇರೆಯವರಲ್ಲಿದ್ದ ಈ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಖರೀದಿಸಿದ್ದರು. ಇದೀಗ ಇಲ್ಲಿ ಯಾವುದೇ ಇಲಾಖೆಗಳಿಂದ ಪರವಾನಿಗೆ ಪಡೆಯದೇ ಕಲ್ಲು ಗಣಿಗಾರಿಕೆ ಆರಂಭಿಸಲಾಗಿದೆ. ಯಾವುದೇ ಪರವಾನಿಗೆ ಇಲ್ಲದೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ, ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.

ಇಲ್ಲಿ ಬೃಹತ್ ಬಂಡೆಗಳನ್ನು ಒಡೆದು, ಭೂಗರ್ಭದಲ್ಲಿನ ಬಂಡೆಗಳನ್ನು ಅಗೆದು ಬಳಿಕ ಅದನ್ನು ಸಣ್ಣ ಸಣ್ಣ ಸೈಝ್ ಕಲ್ಲುಗಳಾಗಿ ಮಾಡಿ ಮಾರಾಟ ಮಾಡಲಾಗುತ್ತಿದೆ. ರಾತ್ರಿ ಹಗಲೆನ್ನದೇ ಇಲ್ಲಿ ಈ ಕೆಲಸ ನಡೆಯುತ್ತಿದೆ.