ಹಣದಾಸೆಗೆ ಮಿತ್ರರಿಂದಲೇ ಉಮೇಶ್ ಕೊಲೆ ?

ಉಮೇಶ್ ಶೆಟ್ಟಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ದಿನಗಳ ಹಿಂದೆ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ (29) ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದ್ದು, ಹಣದ ಆಸೆಗಾಗಿ ಗಳಸ್ಯ ಕಂಠಸ್ಯ ಸ್ನೇಹಿತರೇ ಕೊಲೆ ಮಾಡಿದ್ದಾರೆಂಬ ಮಾತು ಸ್ಥಳೀಯರಿಂದ ಕೇಳಿಬರುತ್ತಿದೆ.

ಪೊಲೀಸರು ನಾಲ್ವರು ಆರೋಪಿಗಳನ್ನು ಸಂಶಯದ ಮೇಲೆ ಬಂಧಿಸಿದ್ದು, ಆರೋಪಿಗಳನ್ನು ನಿಡ್ಡೋಡಿ ನಿವಾಸಿಗಳಾದ ರಾಜೇಶ್ ಶೆಟ್ಟಿ, ತಿಲಕ್ ಪೂಜಾರಿ ಹಾಗೂ ಕಿನ್ನಿಗೋಳಿ ಕೊಡೆತ್ತೂರು ಬಳಿಯ ಪ್ರಸಾದ ಆಚಾರ್ಯ ಹಾಗೂ ಅವನ ಚಿಕ್ಕಮ್ಮನ ಮಗ ಚಿಕ್ಕಮಗಳೂರು ಮೂಡುಗೆರೆ ನಿವಾಸಿ ಪ್ರಕಾಶ್ ಆಚಾರ್ಯ ಎಂದು ಗುರುತಿಸಲಾಗಿದೆ. ಈ ನಾಲ್ವರು ಉಮೇಶ್ ಶೆಟ್ಟಿ ಸ್ನೇಹಿತರಾಗಿದ್ದು ಕೊಲೆಯಲ್ಲಿ ರಾಜೇಶ್ ಶೆಟ್ಟಿ ಪ್ರಧಾನ ಸೂತ್ರದಾರ ಎಂದು ತಿಳಿದುಬಂದಿದೆ. ರಾಜೇಶ್ ಶೆಟ್ಟಿ ಹಾಗೂ ಉಮೇಶ್ ಶೆಟ್ಟಿ ಆತ್ಮೀಯ ಮಿತ್ರರಾಗಿದ್ದು, ಎಂ ಆರ್ ಪಿ ಎಲ್.ನಲ್ಲಿ ಕೆಲಸ ಮಾಡಿಕೊಂಡು ಕಲ್ಲಿನ ಕ್ವಾರಿ ಉದ್ಯಮ ಮಾಡುವುದರಲ್ಲಿದ್ದರು. ತಿಲಕ್ ಪೂಜಾರಿ ಕಲ್ಲಮುಂಡ್ಕೂರು ಪಂಚಾಯತಿ ಸದಸ್ಯನ ಸಂಬಂಧಿಯಾಗಿದ್ದು ಸದ್ಯದಲ್ಲೇ ಮದುವೆಯೂ ನಿಶ್ಚಯವಾಗಿತ್ತು ಎನ್ನಲಾಗಿದೆ.

ಕಿಲೆಂಜೂರು ರಾಮಕೃಷ್ಣ ಶೆಟ್ಟಿ ಹಾಗೂ ಪ್ರಭಾವತಿ ಶೆಟ್ಟಿ ಮಗನಾದ ಉಮೇಶ್ ಶೆಟ್ಟಿ ಸ್ಥಳೀಯವಾಗಿ ಉತ್ತಮ ನಡತೆಯುಳ್ಳವರಾಗಿದ್ದು, ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ತಮ್ಮ ಪಾಡಿಗೆ ವ್ಯವಹಾರ ಮಾಡಿಕೊಂಡಿದ್ದರು. ಮೂರು ವರ್ಷದ ಹಿಂದೆ ಮುಂಬಯಿಂದ ಊರಿಗೆ ಆಗಮಿಸಿ ಕಳೆದ ಕೆಲವು ತಿಂಗಳಿನಿಂದ ಪಣಂಬೂರಿನ ಟ್ರಾನ್ಸಫೋರ್ಟ್ ಉದ್ಯಮದಲ್ಲಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.  ವಾರದ ಹಿಂದೆ ತನ್ನ ಆತ್ಮೀಯ ಗೆಳೆಯರೊಂದಿಗೆ ತಾನು ಕ್ವಾರಿ ಉದ್ಯಮ ಪ್ರಾರಂಭಿಸುವ ಇರಾದೆಯಿದೆ ಎಂದು ತಿಳಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಕಳೆದ ತಿಂಗಳ ಹಿಂದೆ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಉದ್ಯಮಿ ಉಮೇಶ್ ಶೆಟ್ಟಿ ಬಳಿ ಸುಮಾರು ಹಣವಿದ್ದು ಅದನ್ನು ಬಿಳಿಯಾಗಿಸಲು ಮಿತ್ರರಿಗೆ ಕೊಟ್ಟಿದ್ದನು. ಆದರೆ ಮಿತ್ರರು ಪ್ಲಾನ್ ಮಾಡಿ ಹಣವನ್ನು ವಾಪಾಸು ಮಾಡುವ ಬದಲು ಉಮೇಶ್ ಶೆಟ್ಟಿಯನ್ನು ಮುಗಿಸಲು ಹೊಂಚು ಹಾಕಿದ್ದರು ಎಂಬ ಮಾಹಿತಿ ಬೆಳಕಿಗೆಬಂದಿದೆ. ಆರೋಪಿಗಳು ಹಣದ ಆಸೆಗಾಗಿ ಡಿಸೆಂಬರ್ 28ರಂದು ಸಂಜೆ ಪಕ್ಷಿಕೆರೆ ಬಳಿ ಬಸ್ಸಿನಿಂದ ಇಳಿದ ಉಮೇಶನನ್ನು ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಅಪಹರಿಸಿ, ಬಳಿಕ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ನಿರ್ಜನ ಗುಡ್ಡ ಪ್ರದೇಶದಲ್ಲಿ ನಾಲ್ವರು ಸೇರಿ ಮಿತ್ರನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ.

ಕೊಲೆ ಮಾಡುವ ಸಂದರ್ಭದಲ್ಲಿ ಉಮೇಶ್ ಶೆಟ್ಟಿಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಉಮೇಶ್ ಶೆಟ್ಟಿ ಮುಖದಲ್ಲಿ ತರಚು ಗಾಯಗಳು ಪತ್ತೆಯಾಗಿವೆ. ಗುರುವಾರ ಮಂಗಳೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಪತ್ರಿಕಾಗೋಷ್ಠಿ ಕರೆಯಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.