ಕೇರಳದಲ್ಲಿ ಇನ್ನೂ ಹಲವು ಸ್ಫೋಟ ನಡೆಸುವ ಪಿತೂರಿ ಹೂಡಿದ್ದ ಉಗ್ರರು

ಕಾಸರಗೋಡು : ರಾಜ್ಯದಲ್ಲಿ  ಬೇಸ್ ಮೂವ್ಮೆಂಟ್ ಸಂಘಟನೆ ಇನ್ನೂ ಹಲವಾರು ಸ್ಫೋಟಗಳನ್ನು ನಡೆಸಲು ಸಂಚು ಹೂಡಿತ್ತು ಎಂದು ಕೊಲ್ಲಂ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟ ಪ್ರಕರಣಗಳ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು ಹೇಳಿದ್ದಾರೆ. ಈ ಸ್ಫೋಟಗಳ ಹಿಂದೆ ಸಂಘಟನೆಯ ಸದಸ್ಯರ ಸ್ಪಷ್ಟ ಕೈವಾಡವಿದೆಯೆಂದು ಪೊಲೀಸರು ನಂಬಿದ್ದಾರೆ.

ಮಧುರೈ ಮತ್ತು ಚೆನ್ನೈನಿಂದ ಬಂಧಿತರಾಗಿದ್ದ ಅಲ್-ಕೈದಾದೊಂದಿಗೆ ನಂಟು ಹೊಂದಿದ್ದಾರೆನ್ನಲಾದ ಸಂಘಟನೆಯ ಸದಸ್ಯರನ್ನು ಪೊಲೀಸರು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಘಟನೆಗೆ  ಕೇಂದ್ರ ಸರಕಾರಿ ಕಚೇರಿಗಳನ್ನು ಹಾಗೂ ಕೆಲವು ಗಣ್ಯರನ್ನು ಟಾರ್ಗೆಟ್ ಮಾಡುವ ಉದ್ದೇಶವಿತ್ತೆಂದೂ  ತನಿಖೆಯಿಂದ ತಿಳಿದು ಬಂದಿದೆಯೆಂದು ಮೂಲಗಳು ತಿಳಿಸಿವೆ.

ಮುಂದಿನ ಎರಡು ತಿಂಗಳುಗಳಲ್ಲಿ ಈ ಸಂಘಟನೆ ಕೇರಳ ಮತ್ತು ತೆಲಂಗಾಣದಲ್ಲಿ ಕನಿಷ್ಠ ಎರಡು ದಾಳಿಗಳನ್ನು ನಡೆಸಲು ಯೋಜಿಸಿತ್ತೆಂಬ ಮಾಹಿತಿಯನ್ನು ತನಿಖಾಕಾರರು ಪಡೆದಿದ್ದಾರೆ. ತಮಿಳುನಾಡಿನಿಂದ ಈ ಸಂಘಟನೆ ಹೊರಬಿದ್ದ ನಂತರ ಆ ರಾಜ್ಯದಲ್ಲಿ ಯಾವುದೇ  ಉಗ್ರ ಕೃತ್ಯಗಳನ್ನು ನಡೆಸುವ ಬಗ್ಗೆ  ಸಂಘಟನೆ ಯೋಚಿಸಿಲ್ಲವೆನ್ನಲಾಗಿದೆ.

ಕೊಚ್ಚಿ ಡಿಸಿಪಿ ಅರುಲ್ ಆರ್ ಬಿ ಕೃಷ್ಣ ಅವರ ನೇತೃತ್ವದಲ್ಲಿ  ವಿಶೇಷ ತನಿಖಾ ತಂಡವೊಂದು ತನಿಖೆ ನಡೆಸುತ್ತಿದ್ದು ಮೂಲಗಳ ಪ್ರಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಸಾಧ್ಯತೆಯಿದೆ.

ಇನ್ನೂ ಹಲವು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಸುವ ವಾಟ್ಸಪ್ ಸಂದೇಶವೊಂದು ಪೊಲೀಸರಿಗೆ ಕಳೆದ ತಿಂಗಳು ಬಂದಿದ್ದು ಈ ಬಗ್ಗೆ ಪ್ರಸಕ್ತ ತನಿಖೆ ನಡೆಯುತ್ತಿದೆ. ಈ ಸಂದೇಶ ಬಂದ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿಲ್ಲವೆಂದು ತನಿಖೆ ವೇಳೆಗೆ ತಿಳಿದು ಬಂದಿದೆ.

ಬೇಸ್ ಮೂವ್ಮೆಂಟ್ ಸದಸ್ಯರು ಸುಮಾರು 20 ಮೊಬೈಲ್ ಫೋನುಗಳನ್ನು ಬಳಸುತ್ತಿದ್ದು, ಬೆದರಿಕೆಗಳು ಹಾಗೂ ಇತರ ಸಂದೇಶಗಳನ್ನು ಕಳುಹಿಸಲು ಅವರು ವೈ ಫೈ ಉಪಯೋಗಿಸುತ್ತಿದ್ದಾರೆಂಬ ಬಗ್ಗೆ ಮಾಹಿತಿಯಿದೆ.