ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ಪುತ್ರ ಸರಗಳವು ಪ್ರಕರಣದಲ್ಲಿ ಸೆರೆ

ಸಾಂದರ್ಭಿಕ ಚಿತ್ರ

2.26 ಲಕ್ಷ ರೂ ಚಿನ್ನ, 2 ಸ್ಕೂಟರ್ ಸಹಿತ ಇಬ್ಬರು ಪೊಲೀಸ್ ವಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೈಕುಗಳಲ್ಲಿ ತೆರಳಿ ಮಹಿಳೆಯರ ಸರ ಕಳವುಗೈಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಒಬ್ಬ ಆರೋಪಿ ಉಳ್ಳಾಲ ನಗರಸಭೆಯ ಮುಖ್ಯಾಧಿಕಾರಿಯ ಪುತ್ರ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳನ್ನು ವಿಮರ್ಶ್ ಆಳ್ವ (21) ಮತ್ತು ಪಾಂಡೇಶ್ವರ ನಿವಾಸಿ ಶಾಹಿಲ್ ಹುಸೇನ್ (21) ಎಂದು ಗುರುತಿಸಲಾಗಿದೆ. ಇದರಲ್ಲಿ ವಿಮರ್ಶ್ ಉಳ್ಳಾಲ ಟಿಎಂಸಿ ಮುಖ್ಯಾಧಿಕಾರಿ ಮರೋಳಿ ನಿವಾಸಿ ವಾಣಿ ಆಳ್ವರ ಪುತ್ರ ಎಂದು ತಿಳಿದುಬಂದಿದೆ. ಇಬ್ಬರನ್ನೂ ಗಣಪತಿ ಹೈಸ್ಕೂಲ್ ರಸ್ತೆಯ ಬಳಿ ವಶಕ್ಕೆ ತೆಗೆದುಕೊಳ್ಳಲಾಯಿತು.

ಡಿ 13ರಂದು ಮೂಡುಬಿದಿರೆಯಲ್ಲಿ ಹಾಗೂ ಡಿ 25ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಮಡ್ಯಾರಿನಲ್ಲಿ ನಡೆದ ಕಳವು ಕೃತ್ಯದಲ್ಲಿ ಇವರಿಬ್ಬರೂ ಶಾಮೀಲಾಗಿದ್ದಾರೆ. ಪೊಲೀಸರು ಈಗಾಗಲೇ 2.26 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ಎರಡು ಹೊಂಡಾ ಆ್ಯಕ್ಟೀವಾ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.