ಜನರ ಸಹಭಾಗಿತ್ವದಲ್ಲಿ ಬತ್ತಿದ್ದ ಉಲ್ಲಾಳ ಕೆರೆ ಅಭಿವೃದ್ಧಿ ಆರಂಭ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಭೀಕರ ಬರಗಾಲದಿಂದಾಗಿ ಬತ್ತಿ ಹೋಗಿದ್ದ ತಾಲೂಕಿನ ಬಿಸಲಕೊಪ್ಪದ ಉಲ್ಲಾಳದ ಸಾರ್ವಜನಿಕ ಕೆರೆಯನ್ನು ಅಲ್ಲಿಯ ಜನರೇ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಕಂಡುಬಂದಿದೆ.

ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಲ್ಲಾಳದಲ್ಲಿ 150 ಮನೆಗಳಿದ್ದು, ನೀರಿನ ಅಭಾವದಿಂದಾಗಿ 600ಕ್ಕೂ ಅಧಿಕ ಜನರಿಗೆ ನೀರಿನ ತುಟಾಗ್ರತೆಯ ಬಿಸಿ ತಟ್ಟಿದ ಹಿನ್ನೆಲೆಯಲ್ಲಿ ಅಂದಾಜು 4 ಎಕರೆ ವಿಸ್ತೀರ್ಣದ ಕೆರೆಯ ಹೂಳೆತ್ತಲು ಗ್ರಾಮಸ್ಥರಿಂದಲೇ ಹಣ ಸಂಗ್ರಹಿಸಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಉಲ್ಲಾಳದ ಕೆರೆ ಪ್ರಸಕ್ತ ಸಾಲಿನ ಬರದ ಬೇಗೆಗೆ ಸಂಪೂರ್ಣ ಬತ್ತಿ ಹೋಗಿದ್ದು, ಇದರಿಂದ ಜಾನುವಾರುಗಳ ಕುಡಿಯುವ ನೀರಿಗೆ ಹಾಗೂ ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಕೆರೆ ಹೂಳೆತ್ತುವುದರಿಂದ ಮುಂದಿನ ದಿನಗಳಲ್ಲಿ ಈ ಭಾಗದ ಜಲಮೂಲಗಳ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎನ್ನುತ್ತಾರೆ ಜಲತಜ್ಞರು.