ಉಡುಪಿ ಸಂಗೀತ ಕಾರಂಜಿ ಸಾರ್ವಜನಿಕರಿಗೆ ಅರ್ಪಿಸಲಿ

ಕೆಲವು ವರ್ಷಗಳ ಹಿಂದೆ ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ನಗರಾಡಳಿತ ಸಂಗೀತ ಕಾರಂಜಿಯನ್ನು ನಿರ್ಮಾಣ ಮಾಡಿತ್ತು. ಮುಸ್ಸಂಜೆ ಹೊತ್ತಿನಲ್ಲಿ ಇದು ಕಾರ್ಯನಿರ್ವಹಿಸುತ್ತಿತ್ತು. ಬಣ್ಣದ ಬೆಳಕಿನ ಸಂಗೀತ ಕಾರಂಜಿಯ ಸೊಬಗನ್ನು ಸವಿಯಲು ಮಕ್ಕಳು ನಿಸರ್ಗಪ್ರಿಯರು ಹಿರಿಯ ನಾಗರಿಕರು ಅಲ್ಲಿ ಸೇರುತ್ತಿದ್ದರು. ಆದರೆ ಈಗ ಆ ಕಾರಂಜಿ ಕಾರ್ಯನಿರ್ವಹಿಸದೆ ಪಾಳುಬಿದ್ದು ಕಸದ ಕೊಂಪೆಯಾಗಿದೆ. ನಗರಾಡಳಿತ ಲಕ್ಷಕ್ಕೂ ಅಧಿಕ ರೂಪಾಯಿಗಳನ್ನು ಸುರಿದು, ಸಂಗೀತ ಕಾರಂಜಿ ಮತ್ತು ಅದರ ನಿಯಂತ್ರಣ ಕೊಠಡಿ ನಿರ್ಮಾಣ ಮಾಡಿತ್ತು. ಆದರೆ ಈಗ ಸಾರ್ವಜನಿಕರ ಉಪಯೋಗಕ್ಕೆ ಬಾರದ ಸಾರ್ವಜನಿಕರ ಈ ಸೊತ್ತು ನಿರುಪಯುಕ್ತವಾಗಿದೆ. ಇನ್ನಾದರೂ ನಗರಾಡಳಿತ ಸಂಗೀತ ಕಾರಂಜಿಯನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಲಿ.

  • ತಾರಾನಾಥ್ ಮೆಸ್ತ, ಶಿರೂರು