ಉಡುಪಿ ತಾ ಪಂ ಸದಸ್ಯಗೆ ಹಲ್ಲೆ

ಸಾಂದರ್ಭಿಕ ಚಿತ್ರ

 ಉಡುಪಿ : ಹಿರಿಯಡ್ಕ ಸಮೀಪದ ಪೆರ್ಡೂರು ಗ್ರಾಮ ಪಂಚಾಯಿತಿನಲ್ಲಿ ಸಾಮಾನ್ಯ ಸಭೆಗೆ ಹಾಜರಾಗಿ ಪಂಚಾಯತ್ ಕಟ್ಟಡದಿಂದ ಕೆಳಗಿಳಿಯುತ್ತಿದ್ದ ಉಡುಪಿ ತಾಲೂಕು ಪಂಚಾಯಿತಿನ ಪೆರ್ಡೂರು-ಕುಕ್ಕೇಹಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಸುಭಾಸ್ ನಾಯ್ಕಗೆ ಆರೋಪಿ ಪೆರ್ಡೂರು ಗ್ರಾಮ ಪಂಚಾಯತಿನ ಕಾಂಗ್ರೆಸ್ ಬೆಂಬಲಿತ ಸದಸ್ಯ ಗಿರೀಶ್ ಭಟ್ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ತಾ ಪಂ ಸದಸ್ಯ ಸುಭಾಸ್ ನಾಯ್ಕ್ (31) ಪೆರ್ಡೂರು ಪಂಚಾಯಿತಿನಲ್ಲಿ ಸಾಮಾನ್ಯ ಸಭೆಗೆ ಹಾಜರಾಗಿ ಪಂಚಾಯತ್ ಕಟ್ಟಡದಿಂದ ಕೆಳಗಿಳಿಯುತ್ತಿದ್ದ ವೇಳೆ ಸುಭಾಸ್ ಪೆರ್ಡೂರು ಪಂ ಸದಸ್ಯ ಗಿರೀಶ್ ಭಟ್ಟರಲ್ಲಿ ಕಾಮಗಾರಿಯೊಂದರ ಬಗ್ಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಗಿರೀಶ್ ಭಟ್ಟ, ಸುಭಾಸ್ ನಾಯ್ಕಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಆ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ ಪೂಜಾರಿ, ಜಗದೀಶ ಹೆಗ್ಡೆ, ನರಸಿಂಹ ದೇವಾಡಿಗ ಹಾಗೂ ಇತರ ಸದಸ್ಯರು ತಡೆದಾಗ ಆರೋಪಿ ಗಿರೀಶ್ ಭಟ್ಟ ಸುಭಾಸಗೆ ಕೊಲೆ ಬೆದರಿಕೆ ಹಾಕಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸುಭಾಸ್ ಗಿರೀಶ್ ವಿರುದ್ಧ ಹಿರಿಯಡ್ಕ ಠಾಣೆಯಲ್ಲಿ ಕೇಸು ದಾಖಲಾಗಿದೆ.