ಕೊಳಚೆ ನೀರು ಹೊಳೆಗೆ ಬಿಡುವ ನಗರಸಭೆ ವಿರುದ್ಧ ಬೀದಿಗಿಳಿದ ಉಡುಪಿ ನಾಗರಿಕರು

ನಗರಸಭೆ ವಿರುದ್ಧ ನಾಗರಿಕರು ಜಾಥಾ ನಡೆಸಿದರು

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ಕೊಡವೂರು, ಮೂಡುಬೆಟ್ಟು ಪರಿಸರದಲ್ಲಿ ತೋಡಿನಲ್ಲಿ ಹರಿಯುತ್ತಿರುವ ತ್ಯಾಜ್ಯಯುಕ್ತ ಕೊಳಚೆ ನೀರಿನಿಂದ ಬೇಸತ್ತ ಪರಿಸರದ ನೂರಾರು ನಿವಾಸಿಗಳು ಮಂಗಳವಾರ ರಾಷ್ಟ್ರೀಯ ಹೆದ್ದಾರಿ-66 ಕರಾವಳಿ ಬೈಪಾಸ್ ಬಳಿಯಿಂದ ಮಣಿಪಾಲ ಡೀಸಿ ಕಚೇರಿವರೆಗೆ ಕಾಲ್ನಡಿಗೆ ಪ್ರತಿಭಟನಾ ಜಾಥ ನಡೆಸಿ, ಡೀಸಿ ವೆಂಕಟೇಶ್ ಹಾಗೂ ಉಡುಪಿ ನಗರಸಭಾ ಪೌರಾಯುಕ್ತ ಮಂಜುನಾಥಯ್ಯಗೆ ಮನವಿ ನೀಡಿದರು.

ಬೇರೆ ಬೇರೆ ಭಾಗಗಳಿಂದ ಹರಿದು ಬರುವ ಶುದ್ಧ ನೀರಿನ ಮೂರು ಕಿರು ಝರಿಗಳು ಇಂದ್ರಾಳಿಯ ಬಳಿ ಒಂದಾಗಿ, ಉಡುಪಿ ನಗರದ ಬೀಡಿನಗುಡ್ಡೆ, ಕಲ್ಸಂಕ, ಮಠದಬೆಟ್ಟು, ನಿಟ್ಟೂರು, ಕಂಬಳಕಟ್ಟ ಮಾರ್ಗವಾಗಿ ಕೊಡವೂರು ಶಂಕರನಾರಾಯಣ ದೇವಸ್ಥಾನದ ಹಿಂಭಾಗದಿಂದ ಹರಿದು ಕಲ್ಮಾಡಿ ಬಳಿ ಸಮುದ್ರದ ಹಿನ್ನೀರನ್ನು ಸೇರುತ್ತದೆ. ಕೊಡವೂರು ಶಂಕರನಾರಾಯಣ ದೇವಳದ ಇತಿಹಾಸದ ಪ್ರಕಾರ ಈ ನೀರನ್ನು ಇಂದ್ರಾಳಿ ತೀರ್ಥ ಎಂಬ ಉಲ್ಲೇಖವಿದೆ. ಈ ಹೊಳೆಯನ್ನು ಆಧಾರವಾಗಿಟ್ಟುಕೊಂಡು ಈ ಭಾಗದ ಜನರು ವರ್ಷಪೂರ್ತಿ ಕೃಷಿ ಜೀವನಕ್ಕೆ ಆಧಾರವಾಗಬಲ್ಲದು ಎಂದು ಪರಿಸರದ ಜನತೆ ನಂಬಿಕೆ ಇತ್ತು. ಆದರೆ ಕಳೆದ ಸುಮಾರು 15 ವರ್ಷಗಳಿಂದ ಉಡುಪಿ ನಗರಸಭೆಯು ತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಮಾಡದೇ, ಈ ತ್ಯಾಜ್ಯವನ್ನು (ಶೌಚಾಲಯದ ತ್ಯಾಜ್ಯವೂ) ಸೇರಿ ಕಲ್ಮಾಡಿ ಹೊಳೆಗೆ ಸುರಿದು ಶುದ್ಧ ಇಂದ್ರಾಣಿಯನ್ನು ಮಾಲಿನ್ಯದ ಕೊಚ್ಚೆಯಾಗಿದ್ದಾರೆ ಎಂದು ಪ್ರತಿಭಟನಕಾರು ಆಕ್ರೋಶ ವ್ಯಕ್ತಪಡಿಸಿದರು.