ಉಡುಪಿ ನಗರಸಭೆ ಒಳಚರಂಡಿ ನೀರಿನಿಂದ ಖಾಸಗಿ ಲೇಔಟ್ ನಿವಾಸಿಗಳು ಸಂಕಷ್ಟದಲ್ಲಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಿಮುಲ್ಕಿ ಕನ್ನರಪಾಡಿ ಜಯದುರ್ಗಾಪರಮೇಶ್ವರಿ ದೇವಳ ಹಿಂಬದಿಯಿರುವ `ಬಾಲಾಜಿ ಲೇಔಟ್’ಗೆ ಉಡುಪಿ ನಗರಸಭೆಯ ತ್ಯಾಜ್ಯ ನೀರು (ಮ್ಯಾನ್ ಹೋಲ್ ನೀರು) ಹರಿಯುತ್ತಿದ್ದು, ನಿವಾಸಿಗಳು ತೀವ ್ರತೊಂದರೆ ಅನುಭವಿಸುವಂತಾಗಿದೆ.

ಈ ಲೇಔಟಿನಲ್ಲಿ ಸುಮಾರು 15-20 ವರ್ಷಗಳ ಹಿಂದೆ ಜಾಗ ಖರೀದಿ ಮಾಡಿ ಮನೆ ಕಟ್ಟಿಕೊಂಡವರು ಹಲವರಿದ್ದಾರೆ. ಆದರೆ ಈ ಲೇಔಟಿನ ಸುಮಾರು ಒಂದೂವರೆ ಕಿಲೋಮೀಟರ್ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದ್ದು ಇದುವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ. ಆಟೋ ಚಾಲಕರು ಈ ರಸ್ತೆಯಲ್ಲಿ ಬರಲು ಕೇಳುತ್ತಿಲ್ಲ. ಈ ಲೇಔಟ್ ರಸ್ತೆಯು ಕಡೆಕಾರು ಪಂಚಾಯತಿಗೆ ಸೇರಿದ್ದು ಇಲ್ಲಿ ಉಡುಪಿ ನಗರಸಭೆಯ ಒಳಚರಂಡಿ ಒಡೆದು ಬಯಲು ಪ್ರದೇಶವಾದ ಬಾಲಾಜಿ ಲೇಔಟಿಗೆ ಮಲಿನ ನೀರು ಹರಿದು ಬರುತ್ತಿದ್ದು ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿ ಹಾಳಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಈ ಕೊಳಕು ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿದ್ದು ಮುಂದೆ ಕೃಷಿ ಭೂಮಿಗೂ ಹರಡಬಹುದೆನ್ನುವ ಭಯ ಸ್ಥಳೀಯರದ್ದು. ಅದೇ ರೀತಿ ಬಾಲಾಜಿ ಲೇಔಟ್ ಪಕ್ಕದಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಯೂ ಇದೆ. ಈ ಭಾಗಕ್ಕೆ ಕಡೆಕಾರ್ ಗ್ರಾಮ ಪಂಚಾಯತ್ ವತಿಯಿಂದ ನಳ್ಳಿ ನೀರಿನ ವ್ಯವಸ್ಥೆಯನ್ನು ಮಾಡಬೇಕು, ಅದೇ ರೀತಿ ಪ್ರಮುಖ ರಸ್ತೆಯನ್ನು ಒಂದೂವರೆ ಕಿಲೋಮೀಟರ್ ದೂರದ ತನಕ ಕಾಂಕ್ರೀಟೀಗಿಕರಣಗೊಳಿಸಬೇಕು ಹಾಗೂ   ಒಳಚರಂಡಿಯ ನೀರು ಬಿಡುವ ಉಡುಪಿ ನಗರಸಭೆ ವಿರುದ್ಧ ಕಡೆಕಾರು ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ಬಾಲಾಜಿ ಲೇಔಟ್ ನಿವಾಸಿಗಳು ಒತ್ತಾಯಿಸಿದ್ದಾರೆ.