ಉಡುಪಿ ಕುಡಿಯುವ ನೀರು ಕೊರತೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ

ಉಡುಪಿ ನಗರಕ್ಕೆ ನೀರು ಪೂರೈಕೆಯ ಧಾರಣಾ ಶಕ್ತಿಯನ್ನು ತಿಳಿಯದೇ ಬೇಕಾಬಿಟ್ಟಿ ಬಹುಮಹಡಿ ಕಟ್ಟಡಗಳಿಗೆ ಲೈಸೆನ್ಸ್ ನೀಡುತ್ತಿರುವುದು, ಅಸಮರ್ಪಕ ನೀರು ಸರಬರಾಜು ವ್ಯವಸ್ಥೆ ನೀರು ಪೋಲಾಗುತ್ತಿರುವುದು ನಗರದ ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿಗೆಂದು ಸಿಂಗಲ್ ಲೇಔಟ್ ಮಾಡುವಾಗ ಭಾರೀ ತೆರಿಗೆ ವಸೂಲಿ ಮಾಡಿದರೂ ಒಂದೇ ಒಂದು ಕೆರೆಯನ್ನು ಅಭಿವೃದ್ಧಿಗೊಳಿಸದಿರುವುದು, ಉಡುಪಿ ನಗರವು ತೀವ್ರವಾಗಿ ಬೆಳೆಯುತ್ತಿದ್ದರೂ 3ನೇ ಹಂತದ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ವಹಿಸಿರುವುದು, ನಗರದ ದಕ್ಷಿಣ ದಿಕ್ಕಿನಲ್ಲಿ ಸಮುದ್ರ ಪಾಲಾಗುತ್ತಿರುವ ಇನ್ನಿತರ ಹೊಳೆ ನೀರನ್ನು ಅಣೆಕಟ್ಟು ನಿರ್ಮಿಸಿ ಬಳಕೆ ಮಾಡುವ ಯೋಜನೆಗಳ ವಿಫಲತೆ, ಸ್ವರ್ಣ ನದಿಯಲ್ಲಿ ಹೂಳು ಮತ್ತು ಮರಳು ತುಂಬಿದರೂ ಯಾವುದೇ ಕಾಮಗಾರಿಗಳನ್ನು ಮುಂಚಿತವಾಗಿ ಮಾಡದಿರುವುದರಿಂದ ಉಡುಪಿ ನಗರದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಲು ಕಾರಣ. ಟ್ಯಾಂಕರ್ ಮೂಲಕ ನೀರು ಪೂರೈಕೆಯು ಅಸಮರ್ಪಕವಾಗಿದ್ದು, ಇದು ಮತ್ತೊಂದು ಹಗರಣದ ಪಟ್ಟಿಗೆ ಸೇರ್ಪಡೆಯಾಗುತ್ತಿದೆ
ಈವರೆಗೂ ಕರಾವಳಿ ಜಿಲ್ಲೆಗಳಿಗೆ ಮಾತ್ರ ಯಾವುದೇ ನೀರಾವರಿ ಯೋಜನೆಗಳು ಯಾಕಿಲ್ಲ  ಜಿಲ್ಲಾಡಳಿತ, ಉಡುಪಿ ನಗರಸಭೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ರಾಜಕಾರಣಿಗಳು ಜನರ ಮೂಲಭೂತ ಹಕ್ಕುಗಳಲ್ಲೊಂದಾದ ಕುಡಿಯುವ ನೀರನ್ನು ಪೂರೈಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಉಡುಪಿ ನಗರಕ್ಕೆ ಯಾವುದೇ ನೀರಿನ ಸಮಸ್ಯೆಯಿಲ್ಲವೆಂದು ನಗರಸಭಾ ಅಧಿಕಾರಿಗಳು ಪದೇಪದೇ ಪತ್ರಿಕಾ ಹೇಳಿಕೆ ನೀಡುತ್ತಿದ್ದರೂ ನಗರಸಭೆ 2 ದಿನಕ್ಕೊಮ್ಮೆ ಕೆಲವೇ ಗಂಟೆಗೆ ನೀರಿನ ಸರಬರಾಜನ್ನು ಸೀಮಿತಗೊಳಿಸಿದೆ ಕೆಲವೆಡೆ ಅದೂ ಇಲ್ಲವಾಗಿದೆ. ಬೆಳೆಯುತ್ತಿರುವ ಉಡುಪಿ ನಗರದ ತೀವ್ರ ಜಲಕ್ಷಾಮ ನಿವಾರಣೆಗೆ ಇನ್ನಾದರೂ ತುರ್ತು ಕ್ರಮ ಜರುಗಿಸಬೇಕಿದೆ

  • ಚಿತ್ತರಂಜನದಾಸ್ ಶೆಟ್ಟಿ  ಉಡುಪಿ